ಮಾಸ್ಕ್ ಧರಿಸುವ ಕುರಿತು ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊಸ ಸಲಹೆ

Update: 2020-06-07 04:05 GMT

ಹೊಸದಿಲ್ಲಿ, ಜೂ.6: ಕೋವಿಡ್-19 ಸೋಂಕು ತಡೆಗೆ ಸಾರ್ವಜನಿಕರು ಮೂರು ಪದರಗಳ ಫ್ಯಾಬ್ರಿಕ್ ಅಥವಾ ವೈದ್ಯಕೀಯೇತರ ಮಾಸ್ಕ್ ಬಳಕೆ ಮಾಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ಹೊಸ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದೆ.

ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಷ್ಟಕರ ಎನಿಸಿದರೆ ಅರುವತ್ತು ವರ್ಷ ಮೇಲ್ಪಟ್ಟ ಅಥವಾ ಆರೋಗ್ಯ ಸಮಸ್ಯೆ ಇರುವವರು ವೈದ್ಯಕೀಯ ಮಾಸ್ಕ್ ಬಳಸಬೇಕು. ಉಳಿದವರು ಮೂರು ಪದರಗಳ ಫ್ಯಾಬ್ರಿಕ್ ಮಾಸ್ಕ್ ಬಳಸಬೇಕು. ಇದು ಸೋಂಕು ಹರಡುವ ಹನಿಗೆ ತಡೆಯಾಗಿ ಪರಿಣಮಿಸಬಲ್ಲದು ಎಂದು ಶುಕ್ರವಾರ ಬಿಡುಗಡೆ ಮಾಡಿದ ಹೊಸ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಇದೀಗ ಕಂಡುಕೊಂಡಿರುವ ಪುರಾವೆಗಳ ಪ್ರಕಾರ, ದೊಡ್ಡ ಪ್ರಮಾಣದ ಹರಡುವಿಕೆ ಮತ್ತು ಭೌತಿಕ ಅಂತರ ಕಾಪಾಡಿಕೊಳ್ಳಲು ಕಷ್ಟಕರ ಎನಿಸಿದ ಅಂದರೆ ಸಾರ್ವಜನಿಕ ಸಾರಿಗೆ, ಮಳಿಗೆಗಳು ಮತ್ತು ಜನಬಿಬಿಡ ಪ್ರದೇಶಗಳಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದು ಕಡ್ಡಾಯಪಡಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಸಲಹೆ ಮಾಡುತ್ತಿದೆ ಎಂದು ಹೇಳಿದೆ.

ಹೊಸ ಸಂಶೋಧನೆಗಳ ಆಧಾರದಲ್ಲಿ, ಫ್ಯಾಬ್ರಿಕ್ಸ್ ಮಾಸ್ಕ್‌ಗಳು ಕನಿಷ್ಠ ಮೂರು ಪದರಗಳನ್ನು ಹೊಂದಿರಬೇಕು ಎಂದು ಮಹಾನಿರ್ದೇಶಕ ಅಧನೊಮ್ ಘೇಬ್ರಿಯಸ್ ಹೇಳಿದ್ದಾರೆ.

ಬಟ್ಟೆ ಮಾಸ್ಕ್‌ಗಳನ್ನು ಧರಿಸುತ್ತಿರುವವರು ಮೂರು ಪದರಗಳ ಫ್ಯಾಬ್ರಿಕ್ ಮಾಸ್ಕ್ ಬಳಸಬೇಕು. ಇದು ಹೀರಿಕೊಳ್ಳುವ ಹತ್ತಿಯಿಂದ ಮಾಡಿದ್ದಿರಬೇಕು ಹಾಗೂ ಮುಖಕ್ಕೆ ಬಿಗಿಯಾಗಿ ಕಟ್ಟಿಕೊಳ್ಳಬೇಕು. ಇದರ ಜತೆಗೆ ಪಾಲಿಪ್ರೊಪಲೈನ್ ಮತ್ತು ದ್ರವ ನಿರೋಧಕ ಕೃತಕ ಫ್ರಾಬ್ರಿಕ್ ಪದರ ಇರಬೇಕು ಎಂದು ಸಲಹೆ ಮಾಡಿದೆ.

ಮಾಸ್ಕ್ ಧರಿಸಲು ಕಲ್ಮಶಯುಕ್ತ ಕೈಗಳನ್ನು ಬಳಸಿದರೆ ಅಥವಾ ಕೈ ಸ್ವಚ್ಛಗೊಳಿಸದೇ ಪದೇ ಪದೇ ಮಾಸ್ಕ್ ಹಾಕಿ ತೆಗೆದರೆ ಸ್ವಯಂ ಸೋಂಕು ತಗುಲುವ ಸಾಧ್ಯತೆ ಇದೆ. ಮಾಸ್ಕ್ ಇರುವುದರಿಂಧ ನಾವು ಸುರಕ್ಷಿತ ಎಂಬ ತಪ್ಪು ಭಾವನೆಯಿಂದ ಜನ ಕೈಗಳ ಸ್ವಚ್ಛತೆ ಹಾಗೂ ದೈಹಿಕ ಅಂತರವನ್ನು ನಿರ್ಲಕ್ಷಿಸಬಾರದು ಎಂದು ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News