ಪಾಕ್‌ನ ಮಾಜಿ ಆಂತರಿಕ ಸಚಿವರಿಂದ ಅತ್ಯಾಚಾರ: ಅಮೆರಿಕದ ಬ್ಲಾಗರ್ ಆರೋಪ

Update: 2020-06-06 17:22 GMT

ಇಸ್ಲಾಮಾಬಾದ್, ಜೂ. 6: “ಪಾಕಿಸ್ತಾನದ ಮಾಜಿ ಆಂತರಿಕ ಸಚಿವರೊಬ್ಬರು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಹಾಗೂ ಓರ್ವ ಮಾಜಿ ಪ್ರಧಾನಿ ಮತ್ತು ಓರ್ವ ಮಾಜಿ ಆರೋಗ್ಯ ಸಚಿವರು ಕಿರುಕುಳ ನೀಡಿದ್ದಾರೆ” ಎಂದು ಅಮೆರಿಕದ ಬ್ಲಾಗರ್ ಒಬ್ಬರು ಆರೋಪಿಸಿದ್ದಾರೆ.

ಬ್ಲಾಗರ್ ಸಿಂಥಿಯಾ ರಿಚೀ 10 ವರ್ಷಗಳಿಗೂ ಹೆಚ್ಚು ಕಾಲ ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ ಹಾಗೂ ಅವರು ಸೇನೆಗೆ ಪರವಾದ ಧೋರಣೆಯನ್ನು ಹೊಂದಿದ್ದಾರೆ.

ಎಲ್ಲ ಮೂವರು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಪಕ್ಷದ ರಾಜಕಾರಣಿಗಳು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ.

ಮಾಜಿ ಗೃಹ ಸಚಿವ ಹಾಗೂ ಹಾಲಿ ಸೆನೆಟ್ ಸದಸ್ಯ ರಹ್ಮಾನ್ ಮಲಿಕ್ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ರಿಚೀ ಶುಕ್ರವಾರ ಫೇಸ್‌ಬುಕ್ ಲೈವ್ ವೀಡಿಯೊದಲ್ಲಿ ಆರೋಪಿಸಿದ್ದಾರೆ. ಅದೂ ಅಲ್ಲದೆ, ಮಾಜಿ ಪ್ರಧಾನಿ ಯೂಸುಫ್ ರಝಾ ಗಿಲಾನಿ ಮತ್ತು ಮಾಜಿ ಆರೋಗ್ಯ ಸಚಿವ ಮಖ್ದೂಮ್ ಶಹಾಬುದ್ದೀನ್ ನನಗೆ ಕಿರುಕುಳ ನೀಡಿದ್ದಾರೆ ಎಂದು ಹೇಳಿದ್ದಾರೆ.

ಈ ನಡುವೆ, ಪ್ರತಿಪಕ್ಷದ ರಾಜಕಾರಣಿಗಳ ವಿರುದ್ಧ ಆರೋಪ ಮಾಡುವುದಕ್ಕಾಗಿ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಈ ಮಹಿಳೆಯನ್ನು ನೇಮಿಸಿದೆ ಹಾಗೂ ಅದಕ್ಕಾಗಿ ಅವರಿಗೆ ಹಣ ಕೊಡುತ್ತಿದೆ ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ನಾಯಕರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News