ನಷ್ಟ ಭರಿಸುವುದಾದರೆ ಹೋಂಸ್ಟೇ ಮುಚ್ಚಲು ಸಿದ್ಧ: ಕೂರ್ಗ್ ಹೋಂಸ್ಟೇ ಅಸೋಸಿಯೇಶನ್

Update: 2020-06-07 07:19 GMT

ಮಡಿಕೇರಿ ಜೂ.7: ಡಿಸೆಂಬರ್ ಅಂತ್ಯದವರೆಗೆ ಕೊಡಗಿನ ಹೋಂಸ್ಟೇಗಳನ್ನು ತೆರೆಯಲು ಅವಕಾಶ ನೀಡಬಾರದೆಂದು ದುರುದ್ದೇಶಪೂರಿತ ಹೇಳಿಕೆ ನೀಡಿರುವವವರು ಹೋಂಸ್ಟೇಗಳನ್ನೇ ನಂಬಿ ಬದುಕು ಸಾಗಿಸುತ್ತಿರುವ ಮಾಲಕರು ಹಾಗೂ ನೌಕರರಿಗೆ ಆಗುವ ಸಂಪೂರ್ಣ ನಷ್ಟವನ್ನು ಭರಿಸುವುದಾದರೆ ಹೋಂಸ್ಟೇಗಳನ್ನು ಮುಚ್ಚಲು ಸಿದ್ಧವೆಂದು ಕೂರ್ಗ್ ಹೋಂಸ್ಟೇ ಅಸೋಸಿಯೇಶನ್ ಹೇಳಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಶನ್ ಅಧ್ಯಕ್ಷ ಬಿ.ಜಿ.ಅನಂತಶಯನ ಹೋಂಸ್ಟೇಗಳನ್ನು ಅವಲಂಬಿಸಿಕೊಂಡು ಜೀವನ ಸಾಗಿಸುವುದು ಕೂಡ ಬದುಕಿನ ಒಂದು ಹಕ್ಕಾಗಿದ್ದು, ಇದನ್ನು ಕಸಿದುಕೊಳ್ಳುವುದಕ್ಕಾಗಿ ಪಿತೂರಿ ನಡೆಸಿದರೆ ಅಂತಹವರ ವಿರುದ್ಧ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕಳೆದ ಎರಡೂವರೆ ತಿಂಗಳ ಲಾಕ್ ಡೌನ್ ನಿಂದಾಗಿ ಹೋಂಸ್ಟೇ ಗಳನ್ನೇ ನಂಬಿ ಜೀವನ ಸಾಗಿಸುತ್ತಿದ್ದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಎರಡು ವರ್ಷಗಳ ಅತಿವೃಷ್ಟಿಯಿಂದಲೂ ಸಾಕಷ್ಟು ನಷ್ಟವಾಗಿದೆ. ಹೋಂಸ್ಟೇಗಳನ್ನು ತೆರೆಯಲು ಸರಕಾರವೇ ಅನುಮತಿ ನೀಡಿದ್ದು, ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡು ಅತಿಥಿ ಸತ್ಕಾರವನ್ನು ಮಾಡಲಿದ್ದೇವೆ. ಕಷ್ಟ, ನಷ್ಟಗಳ ನಡುವೆ ಹೋಂಸ್ಟೇಗಳನ್ನು ಆರಂಭಿಸದೆ ಇದ್ದರೆ ಇವುಗಳನ್ನೇ ನಂಬಿರುವ ನೌಕರ ವರ್ಗದ ಕುಟುಂಬಗಳು ಬೀದಿಗೆ ಬರುತ್ತವೆ ಎಂದರು.

ದೊಡ್ಡ ದೊಡ್ಡ ರೆಸಾರ್ಟ್‌ಗಳ ಪರ ಮಾತನಾಡುವವರು ಮಧ್ಯಮ ವರ್ಗ ನಡೆಸುವ ಹೋಂಸ್ಟೇಗಳ ವಿರುದ್ಧ ಹೇಳಿಕೆ ನೀಡಿರುವುದನ್ನು ಗಮನಿಸಿದರೆ ಇದರ ಹಿಂದೆ ಯಾವುದೋ ಲಾಭದ ದುರುದ್ದೇಶ ಅಡಗಿದೆ ಎಂದು ಅನಂತಶಯನ ಆರೋಪಿಸಿದರು.

ಹೋಂಸ್ಟೇಗಳಿಗಿಂತ ರೆಸಾರ್ಟ್ ಮತ್ತು ಲಾಡ್ಜ್‌ಗಳಲ್ಲಿ ಆರೋಗ್ಯ ವರ್ಧಕ ವ್ಯವಸ್ಥೆಗಳಿಗೆ ವೆಚ್ಚ ಹೆಚ್ಚಾಗುತ್ತದೆ. ಹೋಂಸ್ಟೇಗಳಲ್ಲಿ 2ರಿಂದ 5 ಕೋಣೆಗಳು ಮಾತ್ರ ಇರುವುದರಿಂದ ಕೋವಿಡ್ 19 ಸಂಬಂಧಿತ ಮುಂಜಾಗೃತಾ ಕ್ರಮಗಳಿಗೆ ಮತ್ತು ಪರೀಕ್ಷೆಗೆ ಹೆಚ್ಚಿನ ವೆಚ್ಚವಾಗುವುದಿಲ್ಲ. ಈಗಾಗಲೇ ಅಧಿಕೃತ ಹೋಂಸ್ಟೇಗಳಲ್ಲಿ ಸ್ವಚ್ಛತೆ ಮತ್ತು ಆರೋಗ್ಯ ಸುರಕ್ಷಾ ವ್ಯವಸ್ಥೆಗಳಿಗೆ ಆದ್ಯತೆ ನೀಡಲಾಗಿದೆ. ಆದರೆ ವಿನಾಕಾರಣ ಹೋಂಸ್ಟೇಗಳ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ಜನರ ಹಾದಿ ತಪ್ಪಿಸುವ ಕಾರ್ಯ ನಡೆಯುತ್ತಿದೆ. ಇದೇ ಕಾರಣಕ್ಕೆ ಮುಂದೊಂದು ದಿನ ಬಂದ ಅತಿಥಿಗಳ ಮೇಲೆ ದೌರ್ಜನ್ಯ ಪ್ರಕರಣಗಳು ನಡೆದರೆ ಹೇಳಿಕೆ ನೀಡಿದವರೇ ಹೊಣೆ ಹೊರಬೇಕಾಗುತ್ತದೆ ಎಂದು ಅನಂತಶಯನ ಎಚ್ಚರಿಕೆ ನೀಡಿದರು. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಕೊಡಗನ್ನು ಕೈಬಿಡಲಾಗಿದೆ
ಲಾಕ್ ಡೌನ್ ಸಡಿಲಿಕೆಯ ನಂತರ ರಾಜ್ಯದ ಪ್ರವಾಸೋದ್ಯಮದ ಚೇತರಿಕೆಗೆ ಅಗತ್ಯ ರೂಪುರೇಷಗಳನ್ನು ಸಿದ್ಧಪಡಿಸುವ ಸಂದರ್ಭ ಸರ್ಕಾರ ಸುಮಾರು 14 ಜಿಲ್ಲೆಗಳಿಗೆ ಆದ್ಯತೆ ನೀಡಿದೆ. ಪ್ರವಾಸಿತಾಣಗಳು ಇಲ್ಲದ ಪ್ರದೇಶಗಳನ್ನು ಕೂಡ ಸೇರ್ಪಡೆಗೊಳಿಸಲಾಗಿದೆ. ಆದರೆ ಜನಪ್ರಿಯ ಪ್ರವಾಸಿತಾಣಗಳ ಮೂಲಕ ವಿಶ್ವದ ಗಮನ ಸೆಳೆದಿರುವ ಕೊಡಗು ಜಿಲ್ಲೆಯನ್ನೇ ಕೈಬಿಡಲಾಗಿದೆ ಎಂದು ಅನಂತಶಯನ ಬೇಸರ ವ್ಯಕ್ತಪಡಿಸಿದರು. ಈ ಬಗ್ಗೆ ಸರಕಾರಕ್ಕೆ ಪತ್ರ ಬರೆದು ಜಿಲ್ಲೆಯನ್ನು ಸೇರಿಸಲು ಕೋರಿಕೊಳ್ಳಲಾಗಿದೆ ಎಂದರು.

ಪದಾಧಿಕಾರಿ ಅಂಬೆಕಲ್ಲು ನವೀನ್ ಕುಶಾಲಪ್ಪಮಾತನಾಡಿ, ಅನಧಿಕೃತ ಹೋಂಸ್ಟೇಗಳ ವಿರುದ್ಧ ಕ್ರಮ ಕೈಗೊಳ್ಳಲು ಇದು ಸಕಾಲವಾಗಿದ್ದು, ಜಿಲ್ಲಾಡಳಿತ ತಕ್ಷಣ ಕಾರ್ಯೋನ್ಮುಖವಾಗಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಮೋಂತಿಗಣೇಶ್, ಶಶಿಮೊಣ್ಣಪ್ಪ ಉಪಸ್ಥಿತರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News