ಆರ್ಡರ್ ಮಾಡಿದ್ದು ಮೊಬೈಲ್; ಬಂದದ್ದು ಆಲೂಗಡ್ಡೆ, ಸೋಪು, ಕಲ್ಲು !

Update: 2020-06-07 14:11 GMT

ಚಿಕ್ಕಮಗಳೂರು, ಜೂ.7: ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ಮತ್ತಿತರ ವಸ್ತುಗಳನ್ನು ಆನ್‍ಲೈನ್‍ ನಲ್ಲಿ ಮಾರಾಟ ಮಾಡುವ ಕಾರ್ಪೋರೇಟ್ ಸಂಸ್ಥೆ ಅಮೆಝಾನ್ ನಿಂದ ಮೊಬೈಲ್ ಆರ್ಡರ್ ಮಾಡಿದ್ದ ವ್ಯಕ್ತಿಯೊಬ್ಬರು ಮೋಸ ಹೋದ ಪ್ರಕರಣವೊಂದು ರವಿವಾರ ವರದಿಯಾಗಿದೆ.

ಜಿಲ್ಲೆಯ ಶೃಂಗೇರಿ ಪಟ್ಟಣದ ನಿವಾಸಿ ಹೈದರ್ ಅಲಿ ಎಂಬವರು ವಂಚನೆಗೊಳಗಾಗಿದ್ದು, ಅವರು ಆನ್‍ಲೈನ್‍ನಲ್ಲಿ ನೋಂದಣಿ ಮಾಡಿದ್ದ ರೆಡ್​​​ಮಿ ಮೊಬೈಲ್‍ಗೆ ಬದಲಾಗಿ ಸೋಪು, ಆಲೂಗಡ್ಡೆ ಹಾಗೂ ಕಲ್ಲುಗಳಿರುವ ಬಾಕ್ಸ್ ನೀಡಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಹೈದರ್ ಅಲಿ ಅವರು ಅಮೆಝಾನ್ ಸಂಸ್ಥೆಯ ವೆಬ್‍ಸೈಟ್‍ ನಲ್ಲಿ ರೆಡ್​​​ಮಿ ನೋಟ್-8 ಮೊಬೈಲ್‍ ಅನ್ನು ಆರ್ಡರ್  ಮಾಡಿದ್ದರು. ರವಿವಾರ ಸಂಸ್ಥೆಯ ಸಿಬ್ಬಂದಿ ಪಟ್ಟಣದಲ್ಲಿ ಹೈದರ್ ಅಲಿ ಮನೆಗೆ ಮೊಬೈಲ್ ಬಾಕ್ಸ್ ಅನ್ನು ಡೆಲಿವರಿ ಮಾಡಿದ್ದರು. ಅದೃಷ್ಟವಶಾತ್ ಸಿಬ್ಬಂದಿ ಎದುರೇ ಹೈದರ್ ಅಲಿ ಮೊಬೈಲ್ ಬಾಕ್ಸ್ ತೆರದಿದ್ದು, ಈ ವೇಳೆ ಮೊಬೈಲ್ ಬಾಕ್ಸ್ ನಲ್ಲಿದ್ದ ವಸ್ತುಗಳನ್ನು ಕಂಡು ಅವರು ಬೆಚ್ಚಿ ಬಿದ್ದಿದ್ದಾರೆ. ಮೊಬೈಲ್ ಬಾಕ್ಸ್ ನಲ್ಲಿ ರೆಡ್​​​ಮಿ​​​ ಮೊಬೈಲ್ ಬದಲಾಗಿ ಸೋಪು, ಕಲ್ಲು, ಆಲೂಗಡ್ಡೆಗಳನ್ನು ಕಳಿಸಲಾಗಿದ್ದು, ಕೂಡಲೇ ಅವರು ಸಿಬ್ಬಂದಿಗೆ ಹಣ ನೀಡದೇ ಘಟನೆ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆಂದು ತಿಳಿದು ಬಂದಿದೆ.

ನಾಲ್ಕು ದಿನಗಳ ಹಿಂದೆ ರೆಡ್​​​ಮಿ ನೋಟ್ 8 ಮೊಬೈಲ್‍ಗೆ ಅಮೆಝಾನ್ ನಲ್ಲಿ ಆರ್ಡರ್ ಮಾಡಿದ್ದೆ. ರವಿವಾರ ಬೆಳಗ್ಗೆ ಡೆಲಿವರಿ ಬಾಯ್  ಮೊಬೈಲ್‍ನ ಬಾಕ್ಸ್ ಅನ್ನು ಮನೆಗೆ ತಂದು ಕೊಟ್ಟಿದ್ದಾರೆ. ಬಾಕ್ಸ್ ತೆರೆದು ನೋಡಿದಾಗ ಅದರೊಳಗೆ ಕಲ್ಲು, ವಿಮ್ ಸೋಪು, ಆಲೂಗಡ್ಡೆಯನ್ನು ಇಟ್ಟು ಪ್ಯಾಕ್ ಮಾಡಿರುವುದು ಕಂಡು ಬಂದಿದೆ. ಅಮೆಝಾನ್ ಸಂಸ್ಥೆ ತನ್ನ ಗ್ರಾಹಕರಿಗೆ ಹೀಗೆ ಹಿಂದೆಯೂ ಮೋಸ ಮಾಡಿರುವುದನ್ನು ಗಮನಿಸಿದ್ದರಿಂದ ತಾನು ಕೂಡಲೇ ಬಾಕ್ಸ್ ಪರಿಶೀಲಿಸಿದ್ದರಿಂದ ವಂಚನೆ ಬಯಲಾಗಿದೆ. ಅಮೆಝಾನ್‍ನಂತಹ ದೊಡ್ಡ ಸಂಸ್ಥೆಗಳೇ ಹೀಗೆ ತನ್ನ ಗ್ರಾಹಕರಿಗೆ ವಂಚನೆ ಮಾಡಿದರೆ ಬೇರೆ ಸಂಸ್ಥೆಗಳು ಯಾವ ರೀತಿಯಲ್ಲಿ ವಂಚನೆ ಮಾಡುತ್ತಿರಬಹುದೆಂದು ಊಹಿಸಲು ಸಾಧ್ಯವಾಗುತ್ತಿಲ್ಲ. ವಂಚನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ.

- ಹೈದರ್ ಅಲಿ, ವಂಚನೆಗೊಳಗಾದ ಗ್ರಾಹಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News