ವಿ.ಪರಿಷತ್ ಚುನಾವಣೆ: ಮುಸ್ಲಿಮರಿಗೆ ಸ್ಥಾನ ನೀಡುವಂತೆ ಹೈಕಮಾಂಡ್‍ಗೆ ಒತ್ತಡ- ಮಾಜಿ ಸಚಿವ ನಸೀರ್ ಅಹ್ಮದ್

Update: 2020-06-07 15:06 GMT
ನಸೀರ್ ಅಹ್ಮದ್

ಬೆಂಗಳೂರು, ಜೂ.7: ಮುಸ್ಲಿಮ್ ಸಮುದಾಯದ ನಾಲ್ವರು ಪ್ರತಿನಿಧಿಗಳ ಅಧಿಕಾರವಧಿಯು ಜೂ.30ರಂದು ವಿಧಾನಪರಿಷತ್ತಿನಲ್ಲಿ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಅವಧಿಗೆ ಕನಿಷ್ಠ ಒಬ್ಬ ಮುಸ್ಲಿಮ್ ಅಭ್ಯರ್ಥಿಗೆ ಅವಕಾಶ ಕಲ್ಪಿಸಿಕೊಡುವಂತೆ ಕಾಂಗ್ರೆಸ್ ಹೈಕಮಾಂಡ್ ಗೆ ಒತ್ತಡ ಹೇರಲು ನಿರ್ಧರಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ನಸೀರ್ ಅಹ್ಮದ್ ತಿಳಿಸಿದರು.

ರವಿವಾರ ನಗರದಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಅಬ್ದುಲ್ ಜಬ್ಬಾರ್, ಇಕ್ಬಾಲ್ ಅಹ್ಮದ್ ಸರಡಗಿ ಹಾಗೂ ನಾನು ಜೂ.30ರಂದು ವಿಧಾನಪರಿಷತ್ತಿನ ಸದಸ್ಯತ್ವ ಅವಧಿಯನ್ನು ಪೂರ್ಣಗೊಳಿಸುತ್ತಿದ್ದೇವೆ. ಈಗಾಗಲೇ ರಿಝ್ವಾನ್ ಅರ್ಶದ್ ವಿಧಾನಸಭೆ ಸದಸ್ಯರಾದ ಹಿನ್ನೆಲೆಯಲ್ಲಿ ಅವರ ಸ್ಥಾನ ಬಿಜೆಪಿಯ ಲಕ್ಷ್ಮಣ ಸವದಿ ಪಾಲಾಗಿದೆ ಎಂದರು.

ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ 68 ಸಂಖ್ಯಾ ಬಲವನ್ನು ಹೊಂದಿದ್ದು, ಒಂದು ಸ್ಥಾನಕ್ಕೆ 28 ಶಾಸಕರ ಬೆಂಬಲ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಎರಡು ಸ್ಥಾನಗಳನ್ನು ಗೆಲ್ಲಬಹುದು. ಈ ಪೈಕಿ ಒಂದು ಸ್ಥಾನವನ್ನು ಮುಸ್ಲಿಮ್ ಅಭ್ಯರ್ಥಿಗೆ ನೀಡುವಂತೆ ಕೋರಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರಿಗೆ ಪತ್ರ ಬರೆಯಲಾಗಿದೆ ಎಂದು ಅವರು ಹೇಳಿದರು.

ಇತ್ತೀಚೆಗಷ್ಟೇ ಕೇಂದ್ರದ ಮಾಜಿ ಸಚಿವ ಡಾ.ಕೆ.ರಹ್ಮಾನ್ ಖಾನ್ ನೇತೃತ್ವದಲ್ಲಿ ಮುಸ್ಲಿಮ್ ಶಾಸಕರು ಹಾಗೂ ಪಕ್ಷದ ಪ್ರಮುಖ ಪದಾಧಿಕಾರಿಗಳು ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿದ್ದೇವೆ. ವಿಧಾನಪರಿಷತ್ ಸ್ಥಾನಕ್ಕಾಗಿ ಆಕಾಂಕ್ಷಿಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್‍ಗೆ ಬರೆದಿರುವ ಪತ್ರದಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ಅವರು ಯಾರನ್ನು ಆಯ್ಕೆ ಮಾಡಿದರೂ ನಾವು ಬೆಂಬಲಿಸುತ್ತೇವೆ ಎಂದು ನಸೀರ್ ಅಹ್ಮದ್ ಹೇಳಿದರು.

ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದು ಸ್ವಾಗತಾರ್ಹ. ಕಳೆದ ಲೋಕಸಭೆಯ ಅವಧಿಯಲ್ಲಿ ಐದು ವರ್ಷಗಳ ಕಾಲ ಮಲ್ಲಿಕಾರ್ಜುನ ಖರ್ಗೆ ಸಂಸತ್ತಿನ ಒಳಗೆ ಹಾಗೂ ಹೊರಗೆ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಮೂಲಕ ದೇಶದಲ್ಲಿ ತಮ್ಮದೆ ಆದ ಛಾಪನ್ನು ಮೂಡಿಸಿದ್ದಾರೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News