ಕಾರಿನಲ್ಲಿ ಬರುತ್ತಿದ್ದ ವೇಳೆ ರಸ್ತೆ ಬದಿಯ ಕಲ್ಲು ಬಂಡೆ ಸ್ಫೋಟ: ಸಚಿವ ನಾರಾಯಣಗೌಡ ಅಪಾಯದಿಂದ ಪಾರು

Update: 2020-06-07 15:09 GMT

ಮಂಡ್ಯ, ಜೂ.7: ಸಚಿವ ನಾರಾಯಣಗೌಡ ಅವರು ಕಾರಿನಲ್ಲಿ ಬರುತ್ತಿದ್ದ ವೇಳೆ ರಸ್ತೆ ಬದಿ ಕಲ್ಲು ಬಂಡೆ ಸ್ಫೋಟಗೊಂಡ ಘಟನೆ ನಾಗಮಂಗಲದ ಬಂಕಾಪುರದ ಬಳಿ ನಡೆದಿದೆ.

ಇಂದು ಸಂಜೆ ಸಚಿವರು ಕೆ.ಆರ್.ಪೇಟೆಗೆ ಬರುತ್ತಿದ್ದ ವೇಳೆ ನಾಗಮಂಗಲದ ಬಂಕಾಪುರದ ಬಳಿ ಈ ಘಟನೆ ನಡೆದಿದ್ದು, ಸಚಿವರು ಅಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರು ಜಲಸೂರು ರಸ್ತೆಗಾಗಿ ಕಾಮಗಾರಿ ನಡೆಯುತ್ತಿದೆ. ಇದಕ್ಕಾಗಿ ರಸ್ತೆ ಸಮೀಪವಿರುವ ಕಲ್ಲು ಬಂಡೆಗಳನ್ನು ಸ್ಫೋಟಿಸಿ ತೆಗೆಯಲಾಗುತ್ತಿದೆ. ಇಂದು ಇದೇ ರೀತಿ ಕಲ್ಲು ಬಂಡೆಗಳನ್ನು ಸ್ಫೋಟಿಸುವ ವೇಳೆ ಸಚಿವ ನಾರಾಯಣಗೌಡ ಅವರ ಕಾರು ಸಮೀಪದಲ್ಲೇ ಹಾದುಹೋಗಿದೆ. ಆದರೆ ಯಾವುದೇ ಅಪಾಯವಿಲ್ಲದೇ, ಸಚಿವರು ಪಾರಾಗಿದ್ದಾರೆ. ಸ್ಫೋಟದ ಶಬ್ದಕ್ಕೆ ಸಚಿವರು ಬೆಚ್ಚಿಬಿದ್ದಿದ್ದು, ಗುತ್ತಿಗೆದಾರನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲ್ಲು ಬಂಡೆಗಳನ್ನು ಸ್ಫೋಟಿಸುವ ವೇಳೆ ಗುತ್ತಿಗೆದಾರ ಶ್ರೀನಿವಾಸ್ ರಾಜ್ ಮುಂಜಾಗೃತಾ ಕ್ರಮ ತೆಗೆದುಕೊಂಡಿಲ್ಲ ಎಂದು ಸಚಿವ ನಾರಾಯಣಗೌಡ ಅವರು ಆರೋಪಿಸಿದ್ದಾರೆ. ಅಲ್ಲದೇ, ಗುತ್ತಿಗೆದಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಗುತ್ತಿಗೆದಾರನನ್ನು ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಸಚಿವರ ಸೂಚನೆ ಮೇರೆಗೆ ಗುತ್ತಿಗೆದಾರನನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News