ಕೊರೋನ: ಸಿಎಂ ಪರಿಹಾರ ನಿಧಿಯಲ್ಲಿ 267 ಕೋಟಿ ರೂ. ಸಂಗ್ರಹ; ನಯಾ ಪೈಸೆಯ ಖರ್ಚು ಇಲ್ಲ !

Update: 2020-06-07 17:26 GMT

ಬೆಂಗಳೂರು, ಜೂ.7: ಮಾರಕ ಕೊರೋನ ಸೋಂಕು ನಿಯಂತ್ರಣ ದೃಷ್ಟಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿ ಕೋವಿಡ್-19 ಖಾತೆಗೆ ಮಾರ್ಚ್ 25ರಿಂದ ಮೇ 15ರ ವರೆಗೆ ಒಟ್ಟು 267.72 ಕೋಟಿ ರೂ.ಗಳನ್ನು ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳು ದೇಣಿಗೆ ನೀಡಿದ್ದು, ಆ ಮೊತ್ತದಲ್ಲಿ ಒಂದು ರೂಪಾಯಿಯನ್ನು ಕೂಡಾ ಸೋಂಕು ತಡೆಗಟ್ಟಲು ಖರ್ಚು ಮಾಡಿಲ್ಲ ಎಂಬ ಅಂಶ ಮಾಹಿತಿ ಹಕ್ಕು ಕಾಯ್ದೆಯಿಂದ ಬಹಿರಂಗವಾಗಿದೆ ಎಂದು ಆರ್ ಟಿಐ ಕಾರ್ಯಕರ್ತ ಟಿ.ನರಸಿಂಹಮೂರ್ತಿ ಆರೋಪಿಸಿದ್ದಾರೆ.

ನರಸಿಂಹಮೂರ್ತಿ ಆರ್ ಟಿಐನಡಿ ಈ ಸಂಬಂಧ ಕೋರಿದ್ದ ಮಾಹಿತಿಗೆ ಮುಖ್ಯಮಂತ್ರಿ ಸಚಿವಾಲಯದಿಂದ ವಿವರ ನೀಡಿದ್ದು, 'ಕೊರೋನ ಸೋಂಕು ನಿಯಂತ್ರಣಕ್ಕೆ ಸರಕಾರದ ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ಅನುದಾನದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಚಿಕಿತ್ಸೆ/ ರೋಗ ಹರಡುವುದನ್ನು ತಪ್ಪಿಸಲು ವೆಚ್ಚ ಭರಿಸುತ್ತಿದ್ದು, ಸಿಎಂ ಪರಿಹಾರ ನಿಧಿ ಖಾತೆಯಲ್ಲಿರುವ ಹಣವನ್ನು ಅವಶ್ಯ ತುರ್ತು ಸೇವೆಗಳಿಗೆ ಉಪಯೋಗಿಸುವ ಸಲುವಾಗಿ 'ಆಪತ್ ನಿಧಿಯಾಗಿ ಕಾಯ್ದಿರಿಸಲಾಗಿದೆ' ಎಂದು ಸ್ಪಷನೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ.

"ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ತುರ್ತು ಅಗತ್ಯಗಳಿಗಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿದ ಸರಕಾರ ಆ ಮೊತ್ತದಲ್ಲಿ ಒಂದು ನಯಾಪೈಸೆಯನ್ನು ಘೋಷಿತ ಉದ್ದೇಶಕ್ಕೆ ವೆಚ್ಚ ಮಾಡದೆ 'ಆಪತ್ ನಿಧಿಯಾಗಿ' ಕಾಯ್ದಿರಿಸಲಾಗಿದೆ ಎಂದು ಮುಖ್ಯಮಂತ್ರಿ ಸಚಿವಾಲಯ ಮಾಹಿತಿ ನೀಡಿದರುವುದು ಜನಸಾಮಾನ್ಯರಿಗೆ ವಂಚನೆ ಮಾಡಿದಂತಾಗಿದೆ" ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಟಿ.ನರಸಿಂಹಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ರಾಜ್ಯದಲ್ಲಿ ಕೊರೋನ ಸೋಂಕಿನಿಂದ ಈಗಾಗಲೇ 61 ಮಂದಿ ಅಸುನೀಗಿದ್ದು, 5,200 ಕ್ಕೂ ಅಧಿಕ ಮಂದಿಗೆ ರೋಗ ತಗುಲಿದ್ದು, ಇನ್ನೂ ಅನೇಕ ಜನರು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಬಹಳ ಮುಖ್ಯವಾಗಿ ವಲಸೆ ಕಾರ್ಮಿಕರು ಸೇರಿದಂತೆ ಬಡ ಕೂಲಿಗಳ ಗೋಳಿನ ಕತೆಗಳು ಒಂದೆರಡಲ್ಲ. ಹೀಗಿರುವಾಗ ಜನರ ಸಂಕಷ್ಟಕ್ಕೆ ಹಣ ಸಂಗ್ರಹಿಸಿ ಖಾತೆಯಲ್ಲಿ ಉಳಿಸಿಕೊಂಡರೆ ಏನು ಪ್ರಯೋಜನ. ಈ ಹಣವನ್ನು ಯಾವಾಗ ಬಳಕೆ ಮಾಡುವುದು' ಎಂದು ಅವರು ಪ್ರಶ್ನಿಸಿದ್ದಾರೆ.

ಸೋಂಕು ತಡೆಗಟ್ಟಲು ತುರ್ತು ಅಗತ್ಯಕ್ಕೆ ಸಿಎಂ ಪರಿಹಾರ ನಿಧಿಗೆ ಸಾರ್ವಜನಿಕರಿಂದ ನೆರವು ಕೋರಿದ್ದು, ಸರಕಾರ ತುರ್ತು ಅವಶ್ಯಕತೆಗೆ ಮೊತ್ತವನ್ನು ಬಳಕೆ ಮಾಡದೆ, ಈ ಸಂದರ್ಭ ಮುಗಿದ ಬಳಿಕ ಆ ಮೊತ್ತವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡುವುದು ಅರ್ಥಹೀನ. ಸಂಗ್ರಹಿಸಿರುವ ಅನುದಾನವನ್ನು ಸಮಯಕ್ಕೆ ಸರಿಯಾಗಿ, ಸಮಪರ್ಕ ರೀತಿಯಲ್ಲಿ ಬಳಕೆ ಮಾಡದಿದ್ದರೆ ಕೋರ್ಟ್ ಮೆಟ್ಟಿಲೇರುವ ಮೂಲಕ ಮತ್ತೊಂದು ಹಂತದ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ' ಎಂದು ನರಸಿಂಹಮೂರ್ತಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News