×
Ad

ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ: ಮರುಪರಿಶೀಲನೆಗೆ ಒತ್ತಾಯಿಸಿ ಪ್ರಧಾನಿಗೆ ಸಿದ್ದರಾಮಯ್ಯ ಪತ್ರ

Update: 2020-06-07 23:20 IST

ಬೆಂಗಳೂರು, ಜೂ.7: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು 2020-21ನೆ ಸಾಲಿನ ಮಾರುಕಟ್ಟೆ ಸೀಸನ್‍ಗೆ ಅನ್ವಯಿಸುವಂತೆ 17 ಖಾರಿಫ್ ಬೆಳೆಗಳಿಗೆ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆಗಳನ್ನು ಪುನರ್ ಪರಿಶೀಲನೆ ಮಾಡುವಂತೆ ಒತ್ತಾಯಿಸಿ ಪ್ರಧಾನ ಮಂತ್ರಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರವಿವಾರ ಪತ್ರ ಬರೆದಿದ್ದಾರೆ.

ಈ 17 ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಸಿ2 ವೆಚ್ಚದ ಆಧಾರದ ಮೇಲೆ ಘೋಷಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಆಗ್ರಹಿಸಿರುವ ಅವರು, ಕೋವಿಡ್-19 ಕೃಷಿ ಸಮುದಾಯದ ದುರ್ಬಲತೆಯನ್ನು ಮತ್ತಷ್ಟು ಹೆಚ್ಚಿಸಿದೆ. ರೈತರು ಸುಗ್ಗಿಯ ನಿರೀಕ್ಷೆಯಲ್ಲಿದ್ದ ಸಂದರ್ಭದಲ್ಲಿ ಕೋವಿಡ್-19 ಏಕಾಏಕಿ ದಾಳಿ ಮಾಡಿದೆ. ಇದರ ಪರಿಣಾಮದಿಂದಾಗಿ ಬೇಡಿಕೆ ಮತ್ತು ಬೆಲೆಗಳು ಇದ್ದಕ್ಕಿದ್ದಂತೆ ಕುಸಿದಿದೆ ಎಂದು ತಿಳಿಸಿದ್ದಾರೆ.

ತಮ್ಮ ನೇತೃತ್ವದ ಭಾರತೀಯ ಜನತಾ ಪಕ್ಷ 2022-23ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವ ಭರವಸೆಯನ್ನು ನೀಡಿತ್ತು. ಆದರೆ, ಆ ನಿಟ್ಟಿನಲ್ಲಿ ಯಾವುದೆ ಪ್ರಯತ್ನಗಳು ಸಾಗಿಲ್ಲ. 2018-19ನೆ ಸಾಲಿನ ಬಜೆಟ್‍ನಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು ಉತ್ಪಾದನಾ ವೆಚ್ಚದ ಶೇ.1.5ರಷ್ಟು ಹೆಚ್ಚಿಸುವುದಾಗಿ ಭರವಸೆ ನೀಡಲಾಗಿತ್ತು ಎಂದು ಸಿದ್ದರಾಮಯ್ಯ ಸ್ಮರಿಸಿದ್ದಾರೆ.

ಆದರೆ, ಕನಿಷ್ಠ ಬೆಂಬಲ ಘೋಷಣೆಯಾದಾಗ ಉತ್ಪಾದನಾ ಲೆಕ್ಕಾಚಾರದ ವೆಚ್ಚವು ಎಲ್ಲ ವೆಚ್ಚಗಳನ್ನು ಒಳಗೊಂಡಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸಿತು. ಕನಿಷ್ಠ ಬೆಂಬಲ ಬೆಲೆ ಘೋಷಣೆಯ ಲೆಕ್ಕಚಾರ ಮಾಡುವಾಗ ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗ (ಸಿಎಸಿಪಿ) ಹಲವಾರು ವೆಚ್ಚ, ಲೆಕ್ಕಾಚಾರದ ವಿಧಾನಗಳನ್ನು ಪರಿಗಣಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಕೋವಿಡ್-19 ಇಂದಾಗಿ ರೈತರಿಗೆ ಸಹಾಯ ಮಾಡಲು ಎಲ್ಲ ಕೃಷಿ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ಸೌಲಭ್ಯವನ್ನು ವಿಸ್ತರಿಸಬೇಕು. ಅಲ್ಲದೆ ಅನೇಕ ರೈತರಿಗೆ ಕನಿಷ್ಠ ಬೆಂಬಲ ಬೆಲೆಯಡಿಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರುಕಟ್ಟೆಗಳಿಗೆ ಪ್ರವೇಶವಿಲ್ಲ. ಇದರಿಂದಾಗಿ, ಅಂತಹ ರೈತರು ತಮ್ಮ ಉತ್ಪನ್ನಗಳನ್ನು ಸ್ಥಳೀಯ ವ್ಯಾಪಾರಿಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭಗಳಲ್ಲಿ ಸರಕಾರ ಮಧ್ಯಪ್ರವೇಶಿಸಬೇಕು ಹಾಗೂ ರೈತರ ಉತ್ಪನ್ನಗಳಿಗೆ ಸಾಕಷ್ಟು ಪ್ರಮಾಣದ ಬೆಲೆ ನಿಗದಿಪಡಿಸಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News