ಸಜೀಪನಡು: ಮುಂದಿನ 1 ತಿಂಗಳು ಜಮಾಅತ್ ವ್ಯಾಪ್ತಿಯ ಮಸೀದಿಗಳನ್ನು ತೆರೆಯದಿರಲು ಆಡಳಿತ ಸಮಿತಿ ನಿರ್ಧಾರ

Update: 2020-06-07 18:31 GMT
ಸಾಂದರ್ಭಿಕ ಚಿತ್ರ

ಬಂಟ್ವಾಳ, ಜೂ.7: ಕೊರೋನ ಲಾಕ್‌ಡೌನ್ ಹಿನ್ನೆಲೆಯಲ್ಲಿ ಎರಡು ತಿಂಗಳುಗಳ ಕಾಲ ಪ್ರಾರ್ಥನೆ ಸಲ್ಲಿಸಲು ನಿರ್ಬಂಧಿಸಲಾಗಿತ್ತು. ಇದೀಗ ರಾಜ್ಯ ಸರಕಾರವು ಜೂ.8ರಿಂದ ಮಸೀದಿ ತೆರೆಯಲು ಅನುಮತಿ ನೀಡಿದೆ. ಆದರೆ ಮುಂಜಾಗೃತಾ ಕ್ರಮವಾಗಿ ಸಜೀಪ ಕೇಂದ್ರ ಜಮಾಅತ್ ನ ಅಧೀನದಲ್ಲಿರುವ ಮಸೀದಿಗಳಲ್ಲಿ ಮುಂದಿನ ಒಂದು ತಿಂಗಳವರೆಗೆ ಧಾರ್ಮಿಕ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ.

ಶನಿವಾರ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕೇಂದ್ರ ಜುಮಾ ಮಸೀದಿ, ಮುಹ್ಯದೀನ್ ಮಸೀದಿ ಲಕ್ಷ್ಮಣ ಕಟ್ಟೆ, ಬದ್ರಿಯಾ ಜುಮ್ಮಾ ಮಸೀದಿ ಬಸ್ ಸ್ಟ್ಯಾಂಡ್ ಬಳಿ, ಹವ್ವ ಜುಮಾ ಮಸೀದಿ ಕಂಚಿನಡ್ಕ ಪದವು, ಕುಂಟಾಲ್ ಗುಡ್ಡೆ ಮಸೀದಿ, ಬೋಳಮೆ ಮಸೀದಿ, ಬೈಲಗತ್ತು ಮಸೀದಿಗಳಲ್ಲಿ ಸಾಮೂಹಿಕ ನಮಾಝ್ ಸಹಿತ ಎಲ್ಲಾ ರೀತಿಯ ಧಾರ್ಮಿಕ ಚಟುವಟಿಕೆಗಳನ್ನು ಮುಂದಿನ ಒಂದು ತಿಂಗಳ ವರೆಗೆ ನಡೆಸದಿರಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಕೊರೋನಾ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ನಿರ್ದೇಶನದ ಮೇರೆಗೆ ರಾಜ್ಯ ಸರಕಾರವು ಶುಕ್ರವಾರದ ಜುಮಾ ನಮಾಝ್ ಸಹಿತ ಧಾರ್ಮಿಕ ಚಟುವಟಿಕೆಗೆ ನಿರ್ಬಂಧ ವಿಧಿಸಿತ್ತು. ಇದೀಗ ಜೂ.8ರ ಬಳಿಕ ನಮಾಝ್ ನಿರ್ವಹಿಸಲು ಷರತ್ತುಬದ್ಧ ಅನುಮತಿ ನೀಡಲು ರಾಜ್ಯ ಸರಕಾರ ಮುಂದಾಗಿದೆ. ಆದರೆ ರಾಜ್ಯದಲ್ಲಿ ಕೊರೋನ ಸೋಂಕಿನ ಪ್ರಕರಣ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಸಜೀಪ ಕೇಂದ್ರ ಜಮಾಅತ್ ಕಮಿಟಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಮಾಅತ್ ಅಧ್ಯಕ್ಷ ಹಾಜಿ ಅಬ್ದುಲ್ ರಝಾಕ್ ರವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಶುಕ್ರವಾರದ ಜುಮಾ ನಮಾಝ್ ಸಹಿತ ಎಲ್ಲಾ ರೀತಿಯ ನಮಾಝ್ ಮತ್ತು ಧಾರ್ಮಿಕ ಕಾರ್ಯಕ್ರಮ ನಡೆಸದಿರಲು ನಿರ್ಧರಿಸಲಾಗಿದೆ. ಪರಿಸ್ಥಿತಿ ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News