×
Ad

ಕೊರೋನ ಭೀತಿಯ ನಡುವೆ ರಾಜ್ಯದಲ್ಲಿ ಹೋಟೆಲ್, ಮಾಲ್‍, ಧಾರ್ಮಿಕ ಕೇಂದ್ರಗಳು ಕಾರ್ಯಾರಂಭ

Update: 2020-06-08 19:14 IST

ಬೆಂಗಳೂರು, ಜೂ. 8: ಮಾರಕ ಕೊರೋನ ವೈರಸ್ ಸೋಂಕಿನ ಭೀತಿಯ ನಡುವೆಯೇ ಸುದೀರ್ಘ ಅವಧಿಯ ಲಾಕ್‍ಡೌನ್ ಬಳಿಕ ಹೋಟೆಲ್, ರೆಸ್ಟೋರೆಂಟ್, ಮಾಲ್‍ಗಳು ಕಾರ್ಯಾರಂಭ ಮಾಡಿದ್ದು, ದೇವಸ್ಥಾನಗಳಲ್ಲಿ ಪೂಜೆ, ಮಸೀದಿ, ಚರ್ಚ್‍ಗಳಲ್ಲಿ ಪ್ರಾರ್ಥನೆಗೆ ಅವಕಾಶ ಕಲ್ಪಿಸಿದ್ದರೂ ಜನಸಾಮಾನ್ಯರಲ್ಲಿ ಎಂದಿನ ಉತ್ಸಾಹ ಕಂಡುಬರಲಿಲ್ಲ.

ವ್ಯಾಪಾರ, ವಹಿವಾಟು ಸಹಜ ಸ್ಥಿತಿ ಬರುತ್ತಿದ್ದರೂ, ಕೇಂದ್ರ ಸರಕಾರದ ಮಾರ್ಗಸೂಚಿಯನ್ವಯ ಕೊರೋನ ಸೋಂಕು ನಿಯಂತ್ರಣ ದೃಷ್ಟಿಯಿಂದ ಕಟ್ಟುನಿಟ್ಟಿನ ಷರತ್ತು ವಿಧಿಸಿದ್ದು, ಸಾರ್ವಜನಿಕರು ಮಾಸ್ಕ್ ಧರಿಸಿ, ಸುರಕ್ಷಿತ ಅಂತರ ಕಾಯ್ದುಕೊಂಡು ಹೋಟೆಲ್, ರೆಸ್ಟೋರೆಂಟ್, ಮಾಲ್‍ಗಳತ್ತ ಧಾವಿಸಿದರು. ಎಪ್ಪತ್ತೈದು ದಿನಗಳ ಬಳಿಕ ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ ಕೆಲಕಾಲ ಕೂತು ತಮ್ಮಿಷ್ಟದ ಆಹಾರ, ಕಾಫಿ-ಟೀ ಸೇವಿಸಿ ಸಂತಸಪಟ್ಟರು.

ಸದಾ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಹೋಟೆಲ್, ರೆಸ್ಟೋರೆಂಟ್, ಮಾಲ್‍ಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರವೇ ಇದ್ದರು. ಜನರಿಲ್ಲದೆ ಎಲ್ಲೆಡೆ ಬಿಕೋ ಎನ್ನುತ್ತಿದ್ದ ದೃಶ್ಯ ಎಲ್ಲ ಕಡೆಗಳಲ್ಲಿಯೂ ಸಾಮಾನ್ಯವಾಗಿತ್ತು. ಶಾಲಾ-ಕಾಲೇಜು, ಚಿತ್ರಮಂದಿರ ಹೊರತುಪಡಿಸಿ ಇನ್ನಿತರ ಚಟುವಟಿಕೆಗಳು ಆರಂಭವಾಗಿದ್ದರೂ, ಕೊರೋನ ಸೋಂಕಿನ ಭೀತಿ ಜನರು ಇನ್ನೂ ಹೊರಬಂದಿಲ್ಲ.

ಹೋಟೆಲ್, ರೆಸ್ಟೋರೆಂಟ್, ಮಾಲ್‍ಗಳು, ದೇವಸ್ಥಾನ, ಮಸೀದಿಗಳು ಸೇರಿದಂತೆ ಎಲ್ಲ ಕಡೆಗಳ ಕಡ್ಡಾಯವಾಗಿ ಎಲ್ಲರನ್ನು ಥರ್ಮಲ್ ಸ್ಕ್ಯಾನರ್ ನಿಂದ ಪರೀಕ್ಷೆ ಮಾಡಿ ಪ್ರವೇಶ ಕಲ್ಪಿಸಲಾಗುತ್ತಿತ್ತು. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಸುರಕ್ಷಿತ ಅಂತರ ಕಾಯ್ದುಕೊಳ್ಳುವ ಷರತ್ತು ವಿಧಿಸಿದ್ದು, ಪ್ರವೇಶ ದ್ವಾರದಲ್ಲೆ ಸ್ಯಾನಿಟೈಸರ್ ಬಳಕೆ ಮಾಡಲಾಗುತ್ತಿತ್ತು.

ಈ ಮಧ್ಯೆ ಸುರಕ್ಷಿತ ಅಂತರ ಕಾಯ್ದುಕೊಂಡು ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದರೂ ಭಕ್ತಾಧಿಗಳು ದೇವರ ದರ್ಶನಕ್ಕೆ ಹಿಂದೇಟು ಹಾಕಿದ್ದರಿಂದ ರಾಜ್ಯದ ಬಹುತೇಕ ದೇವಸ್ಥಾನಗಳು ಭಕ್ತರಿಲ್ಲದೆ ಖಾಲಿ ಖಾಲಿಯಾಗಿದ್ದವು. ಹೂವು, ಹಣ್ಣು, ಕಾಯಿ ಕೊಂಡೊಯ್ಯುವಂತಿಲ್ಲ. ಅಲ್ಲದೆ, ದೇವಳಗಳಲ್ಲಿಯೂ ತೀರ್ಥ, ಪ್ರಸಾದ ವಿತರಣೆಗೂ ನಿರ್ಬಂಧ ಹೇರಿರುವುದರಿಂದ ಭಕ್ತರ ಸಂಖ್ಯೆ ವಿರಳವಾಗಿತ್ತು.

ಮೈಸೂರಿನ ಚಾಮುಂಡೇಶ್ವರಿ, ಶೃಂಗೇರಿ ಶಾರದೆ, ಧರ್ಮಸ್ಥಳದ ಶ್ರೀಮಂಜುನಾಥ, ಕೊಲ್ಲೂರು ಮುಕಾಂಬಿಕೆ, ನಂಜನಗೂಡಿನ ನಂಜುಂಡೇಶ್ವರ ಸೇರಿ ಮುಜರಾಯಿ ಇಲಾಖೆಯ ಎಲ್ಲ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ಶ್ರದ್ಧಾ, ಭಕ್ತಿಯಿಂದ ಪೂಜಾ ಕಂಕೈರ್ಯಗಳನ್ನು ನೆರವೇರಿಸಲಾಯಿತು. ಭಕ್ತಾಧಿಗಳು ದೇವರ ದರ್ಶನ ಪಡೆದರು.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಸೀದಿಗಳಲ್ಲಿ ಬಂದ್ ಆಗಿದ್ದ ನಮಾಝ್ ಪ್ರಕ್ರಿಯೆಯು ಸರಕಾರದ ಸೂಚನೆಯ ಮೇರೆಗೆ ರಾಜ್ಯದ ಹಲವು ಮಸೀದಿಗಳಲ್ಲಿ ಆರಂಭಗೊಂಡಿದೆ. ಇನ್ನು ಕೆಲ ಮಸೀದಿಗಳ ಆಡಳಿತ ಸಮಿತಿ ಈ ತಿಂಗಳು ಮಸೀದಿಗಳನ್ನು ತೆರೆಯದಿರಲು ನಿರ್ಧಾರ ಕೈಗೊಂಡಿದ್ದರಿಂದ ಅಲ್ಲಿನ ಮಸೀದಿಗಳು ಎಂದಿನಂತೆ ಬಂದ್ ಆಗಿದ್ದವು.

ಆರಂಭಗೊಂಡ ಮಸೀದಿಗಳಲ್ಲಿ ಸುಬಹ್ (ಪ್ರಾತಃಕಾಲ)ದ ನಮಾಝ್‌ನ್ನು ಸರಕಾರದ ಮಾರ್ಗಸೂಚಿಯಂತೆ ಆರಂಭಿಸಲಾಯಿತು. ಬಾಂಗ್ (ಆಝಾನ್ ಕರೆ)ಗೆ ಕೆಲವು ನಿಮಿಷಗಳಿಗೆ ಮುನ್ನ ಮಸೀದಿಯ ಬಾಗಿಲು ತೆರೆಯಲಾಯಿತು. ಬಾಂಗ್ ಆದ ತಕ್ಷಣ ನಮಾಝ್ ಮಾಡಲಾಯಿತು. ನಮಾಝ್ ಮುಗಿದೊಡನೆ ಮತ್ತೆ ಬಾಗಿಲು ಹಾಕಲಾಯಿತು.

ಕೊರೋನ ವೈರಸ್ ರೋಗ ತಡೆಗಟ್ಟುವ ಸಲುವಾಗಿ ರಾಜ್ಯ ಸರಕಾರ, ವಕ್ಫ್ ಮಂಡಳಿ ಮತ್ತು ಪ್ರಮುಖ ಉಲಮಾ-ಉಮರಾ ಸಂಘಟನೆ ಹಾಗೂ ಖಾಝಿಗಳ ಸೂಚನೆಯಂತೆ ಮನೆಯಲ್ಲೇ ವಝೂ ಮಾಡಿ ಬರಲಾಯಿತು ಮತ್ತು ಮುಸಲ್ಲ ತರಲಾಯಿತು. ಮಸೀದಿ ಪ್ರವೇಶಿಸುವಾಗ ಮತ್ತು ಹೊರಹೋಗುವಾಗ ಸ್ಯಾನಿಟೈಝರ್/ಸಾಬೂನು ಬಳಸಿ ಕೈಗಳನ್ನು ತೊಳೆಯಲಾಯಿತು. ಸುರಕ್ಷಿತ ಅಂತರವನ್ನೂ ಕಾಪಾಡಲಾಯಿತು.

ಮಾಲ್‍ಗಳತ್ತ ತಲೆ ಹಾಕದ ಗ್ರಾಹಕರು

ಮಾಲ್‍ಗಳು ತೆರೆದು ಗ್ರಾಹಕರ ಸ್ವಾಗತಕ್ಕೆ ಸಜ್ಜಾಗಿದ್ದರೂ ಗ್ರಾಹಕರು ಇತ್ತ ತಲೆಹಾಕಲಿಲ್ಲ. ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ ಮಾಡಲು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಸ್ಯಾನಿಟೈಸರ್ ಹಾಕಲು ಕೂಡಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಎರಡು ತಿಂಗಳ ನಂತರ ಮಾಲ್‍ಗಳು ತೆರೆಯುತ್ತಿರುವ ಹಿನ್ನೆಲೆಯಲ್ಲಿ ಕೆಲವು ಸಿಬ್ಬಂದಿ ಹುರುಪಿನಿಂದಲೇ ಆಗಮಿಸಿದರೆ, ಇನ್ನು ಕೆಲವರು ಕೊರೋನ ಭೀತಿಯಿಂದ ಭಯದಿಂದಲೇ ಜೀವನ ಸಾಗಿಸಲೇಬೇಕಾದ ಅನಿವಾರ್ಯತೆಯಿಂದ ಆಗಮಿಸಿದ್ದರು. ಆದರೆ, ಗ್ರಾಹಕರ ಕೊರತೆ ಎದ್ದು ಕಾಣುತ್ತಿತ್ತು. ಇಡೀ ದಿನ ಕೆಲವು ಮಾಲ್‍ಗಳಿಗೆ ಬೆರಳೆಣಿಯಷ್ಟು ಮಂದಿ ಮಾತ್ರ ಗ್ರಾಹಕರು ಆಗಮಿಸಿದ್ದುದು ಕಂಡುಬಂತು.

ವಾರದ ಆರಂಭವಾಗಿರುವುದರಿಂದ ಗ್ರಾಹಕರ ಕೊರತೆ ಎದ್ದು ಕಂಡಿದೆ. ಈ ವಾರಂತ್ಯದ ವೇಳೆಗೆ ಗ್ರಾಹಕರು ಆಗಮಿಸುವ ನಿರೀಕ್ಷೆ ಇದೆ ಎಂದು ಮಾಲ್‍ಗಳ ಮಾಲಕರು ಹಾಗೂ ಸಿಬ್ಬಂದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News