ಹೊರ ರಾಜ್ಯಗಳಿಗೂ ಬಸ್ ಸಂಚಾರಕ್ಕೆ ಕ್ರಮ: ಡಿಸಿಎಂ ಲಕ್ಷ್ಮಣ ಸವದಿ

Update: 2020-06-08 16:59 GMT

ಕಲಬುರಗಿ, ಜೂ.8: ಮಹಾರಾಷ್ಟ್ರವನ್ನು ಹೊರತುಪಡಿಸಿ ಹೊರ ರಾಜ್ಯಗಳಿಗೆ ಬಸ್ ಸಂಚಾರ ಆರಂಭಿಸುವ ಸಂಬಂಧ ಎಲ್ಲ ರಾಜ್ಯಗಳಿಗೂ ಪತ್ರ ಬರೆಯಲಾಗಿದೆ. ಅಲ್ಲಿಂದ ಒಪ್ಪಿಗೆ ಸಿಕ್ಕ ನಂತರ ಬಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದೆಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಲಾಕ್‍ಡೌನ್‍ನಿಂದಾಗಿ ರಾಜ್ಯ ಸರಕಾರಕ್ಕೆ 2200 ಕೋಟಿ ರೂ. ನಷ್ಟವಾಗಿದೆ. ಅದನ್ನು ಸರಿದೂಗಿಸಲು ಬಸ್‍ ಪ್ರಯಾಣ ದರ ಹೆಚ್ಚಳ, ಸಿಬ್ಬಂದಿ ಕಡಿತ ಮಾಡುವುದಿಲ್ಲ. ಬದಲಿಗೆ, ಸೋರಿಕೆ ತಡೆ, ಕಾರ್ಯಕ್ಷಮತೆ ವೃದ್ದಿ ಸೇರಿದಂತೆ ಇತರೆ ಮಾರ್ಗಗಳನ್ನು ಅನುಸರಿಸಲಾಗುವುದೆಂದು ತಿಳಿಸಿದ್ದಾರೆ.

ಈಗಾಗಲೇ ಜಿಲ್ಲೆ ಹಾಗೂ ತಾಲೂಕು ಹಂತದಲ್ಲಿ ಬಸ್ ಸಂಚಾರ ಆರಂಭವಾಗಿದೆ. ಇನ್ನು ಮುಂದೆ ಹೋಬಳಿ, ಹಳ್ಳಿಗಳಿಗೂ ಸಾರಿಗೆ ಬಸ್‍ಗಳು ಹೋಗಲಿವೆ. ಹಾಗೂ ರಾಜ್ಯದ ಒಳಗೆ ಹವಾನಿಯಂತ್ರಿತ(ಏಸಿ ಬಸ್) ಸ್ಲೀಪರ್ ಕೋಚ್ ಬಸ್‍ಗಳ ಸಂಚಾರಕ್ಕೆ ಟಿಕೆಟ್ ಬುಕ್ಕಿಂಗ್‍ಗೆ ಚಾಲನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮುಂದಿನ ಮೂರು ತಿಂಗಳಲ್ಲಿ ಸಾರಿಗೆ ನಿಗಮಗಳಿಗಾಗಿ ನಾಲ್ಕು ಸಾವಿರ ಹೊಸ ಬಸ್‍ಗಳನ್ನು ಖರೀದಿಸಲಾಗುವುದು. ಕೋವಿಡ್-19 ಹಿನ್ನೆಲೆಯಲ್ಲಿ ಸಾರಿಗೆ ಸಿಬ್ಬಂದಿಗಳಿಗೆ ಎರಡು ತಿಂಗಳ ವೇತನವನ್ನು ಸರಕಾರವೇ ನೀಡಿದೆ. ಮೇ ತಿಂಗಳ ವೇತನವನ್ನು ಸರಕಾರವೇ ನೀಡಲಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News