ಒಂದೇ ಸಮುದಾಯದವರಿಗೆ ಟಿಕೆಟ್ ಹಂಚಿಕೆ ನ್ಯಾಯಸಮ್ಮತವಲ್ಲ: ಬಿಜೆಪಿ ಹಿರಿಯ ನಾಯಕರ ಕಳವಳ

Update: 2020-06-08 17:16 GMT
ಎಚ್.ವಿಶ್ವನಾಥ್, ಎಂಟಿಬಿ ನಾಗರಾಜು, ಆರ್.ಶಂಕರ್

ಬೆಂಗಳೂರು, ಜೂ.8: ರಾಜ್ಯದಲ್ಲಿ ಸಮ್ಮಿಶ್ರ ಸರಕಾರವನ್ನು ಕೆಡವಿ ಬಿಜೆಪಿ ಸರಕಾರ ಅಧಿಕಾರ ಹಿಡಿಯಲು ಕಾರಣಕರ್ತರಾದ ಮಾಜಿ ಸಚಿವ ಎಂಟಿಬಿ ನಾಗರಾಜು, ಎಚ್.ವಿಶ್ವನಾಥ್ ಹಾಗೂ ಆರ್.ಶಂಕರ್ ರನ್ನು ವಿಧಾನಪರಿಷತ್ತಿಗೆ ನಾಮನಿರ್ದೇಶನ ಮಾಡುವ ಕಡೆಗೆ ಬಿಜೆಪಿಯಲ್ಲಿ ಚಿಂತನೆ ನಡೆಯುತ್ತಿರುವ ಸಂದರ್ಭದಲ್ಲಿ, ಒಂದೇ ಸಮುದಾಯಕ್ಕೆ ಸೇರಿದವರನ್ನು ಆಯ್ಕೆ ಮಾಡುವುದು ಎಷ್ಟು ಸರಿ ಎಂಬ ಚರ್ಚೆಯೂ ಆರಂಭವಾಗಿದೆ.

ಈ ಮೂರು ಜನರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಹಿಂದಿನ ಸರಕಾರವನ್ನು ಉರುಳಿಸಲು ಶ್ರಮಿಸಿದ್ದರು. ಇವರನ್ನು ಮಂತ್ರಿ ಮಾಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಈ ಹಿಂದೆ ಭರವಸೆಯನ್ನೂ ನೀಡಿದ್ದರು. ಆದರೆ, ಉಪ ಚುನಾವಣೆಯಲ್ಲಿ ಗೆಲ್ಲದಿದ್ದರಿಂದ ಮಂತ್ರಿಯಾಗಿರಲಿಲ್ಲ. ಇದೀಗ ಎಂಎಲ್‍ಸಿ ಮಾಡುವ ಮೂಲಕ ಮಂತ್ರಿಯಾಗುವ ಕನಸು ಕಾಣುತ್ತಿದ್ದು, ಅದಕ್ಕೂ ಅಡ್ಡಿಯಾಗುವ ಸೂಚನೆ ಕಾಣುತ್ತಿದೆ.

ಎಚ್.ವಿಶ್ವನಾಥ್, ಎಂಟಿಬಿ ನಾಗರಾಜು, ಆರ್.ಶಂಕರ್ ಮೂರು ಜನರೂ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದು, ಒಂದೇ ಸಮುದಾಯಕ್ಕೆ ಅವಕಾಶ ನೀಡುವುದು ಸರಿಯಾದ ಕ್ರಮವಲ್ಲ ಎಂಬ ವಾದವೂ ಚರ್ಚೆಯಾಗುತ್ತಿದೆ ಎಂದು ಮೂಲಗಳು ತಿಳಿಸಿದ್ದು, ಇತರೆ ಹಿಂದುಳಿದ ಜಾತಿಯವರಿಗೂ ಅವಕಾಶ ನೀಡಬೇಕು ಎಂದು ಕೆಲವು ಹಿರಿಯ ನಾಯಕರು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ.

ವಿಧಾನಸಭೆಯಲ್ಲಿ ಬಿಜೆಪಿ ಬಹುಮತ ಹೊಂದಿರುವುದರಿಂದ ಮೇಲ್ಮನೆಗೆ ಆಯ್ಕೆಗೆ ಟಿಕೆಟ್ ಗಿಟ್ಟಿಸಲು ಸಾಕಷ್ಟು ಆಕಾಂಕ್ಷಿಗಳೂ ಹುಟ್ಟಿಕೊಂಡಿದ್ದಾರೆ. ವಿಧಾನಪರಿಷತ್ತಿನಲ್ಲಿ ಇದೇ ತಿಂಗಳು ಒಟ್ಟು 16 ಸ್ಥಾನಗಳು ತೆರವಾಗಲಿವೆ. ಅದರಲ್ಲಿ ವಿಧಾನಸಭೆಯಿಂದ ಪರಿಷತ್ತಿಗೆ 7, ಪದವೀಧರ ಕ್ಷೇತ್ರಗಳ 2, ಶಿಕ್ಷಕರ ಕ್ಷೇತ್ರಗಳ 2 ಮತ್ತು ನಾಮನಿರ್ದೇಶನ 5 ಸ್ಥಾನಗಳಿವೆ. ಈ ಪೈಕಿ ವಿಧಾನಸಭೆಯಿಂದ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ 4 ಸ್ಥಾನಗಳು ಬಿಜೆಪಿಗೆ ಅನಾಯಾಸವಾಗಿ ಸಿಗಲಿವೆ. ನಾಮ ನಿರ್ದೇಶನಕ್ಕಿರುವ 5 ಸ್ಥಾನಗಳೂ ಬಿಜೆಪಿ ಸಿಗಲಿದೆ.

'ಆಪರೇಷನ್ ಕಮಲ'ದಲ್ಲಿ ಮುಂಚೂಣಿಯಲ್ಲಿದ್ದರು ಎನ್ನಲಾದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರೂ ವಿಧಾನಪರಿಷತ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಆ ಮೂಲಕ ಸಚಿವ ಸ್ಥಾನ ಗಿಟ್ಟಿಸುವ ಲೆಕ್ಕಾಚಾರ ನಡೆಸಿದ್ದಾರೆ. ಈ ಹಿಂದೆ ವಿಧಾನಪರಿಷತ್ ಸದಸ್ಯರಾಗಿದ್ದ ಅಶ್ವಥ್ ನಾರಾಯಣ, ಭಾನುಪ್ರಕಾಶ್, ಮಾಜಿ ಶಾಸಕ ನಿರ್ಮಲ್ ಕುಮಾರ್ ಸುರಾನ, ಪ್ರೊ.ಮ.ನಾಗರಾಜ್ ಸೇರಿ ಹಲವರು ಆಕಾಂಕ್ಷಿಗಳಾಗಿದ್ದಾರೆ. ಮೂರು ಸ್ಥಾನಗಳು ಹೊರಗಿನಿಂದ ಬಂದವರಿಗೆ ನೀಡಿದರೆ, ಉಳಿದ ಒಂದು ಸ್ಥಾನ ಮೂಲ ನಿವಾಸಿಗಳಿಗೆ ಸಿಗಬಹುದು ಎಂದು ಮೂಲಗಳು ಹೇಳಿವೆ.

ಪರಿಷತ್ ಚುನಾವಣೆಗೆ ಅಧಿಸೂಚನೆ ಹೊರಬಿದ್ದ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಸಲು ಪಕ್ಷದ ಪ್ರಮುಖರು ತೀರ್ಮಾನಿಸಿದ್ದಾರೆ. ಸಾಕಷ್ಟು ಪೈಪೋಟಿ ಇರುವುದರಿಂದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯೊಂದನ್ನು ರಾಷ್ಟ್ರೀಯ ನಾಯಕರಿಗೆ ಕಳುಹಿಸಲು ಚಿಂತನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News