ತುಮಕೂರು ಜಿಲ್ಲೆಗೆ 25.3 ಟಿಎಂಸಿ ಹೇಮಾವತಿ ನೀರು: ಸಚಿವ ಮಾಧುಸ್ವಾಮಿ

Update: 2020-06-08 18:35 GMT

ತುಮಕೂರು, ಜೂ.8: ಜಿಲ್ಲೆಗೆ 25.3 ಟಿಎಂಸಿ ನೀರು ನಿಗದಿಯಾಗಿದೆ. ಈ ಪೈಕಿ 4.4 ಟಿಂಎಂಸಿ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ ನೀರಾವರಿ ಯೋಜನೆಗಳು ಪೂರ್ಣಗೊಳ್ಳದಿರುವುದು ಇದಕ್ಕೆ ಮುಖ್ಯ ಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಚಿಕ್ಕನಾಯಕನಹಳ್ಳಿ, ಶಿರಾ, ಗುಬ್ಬಿ ತಾಲೂಕು ಸೇರಿದಂತೆ ಜಿಲ್ಲೆಯ 90ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಕಾಣಬೇಕಾಗಿದ್ದು, ಈ ಯೋಜನೆಗಳು ಪೂರ್ಣಗೊಳ್ಳದೆ ನಿಗದಿತ ನೀರು ಪೂರೈಕೆ ಮಾಡಲು ಕಾನೂನಡಿ ಅವಕಾಶವಿಲ್ಲ. ಆದರೂ ಜಲಾಶಯದ ನೀರು ಹರಿದು ಸಮುದ್ರದ ಪಾಲಾಗಬಾರದೆಂಬ ಉದ್ದೇಶದಿಂದ ಕಾನೂನು ಮೀರಿ ಮೇ 1 ರಿಂದ ಜಿಲ್ಲೆಗೆ ನೀರು ಹರಿಸಲಾಗಿದೆ ಎಂದರು. 

ಪ್ರತಿ ವರ್ಷ ಜೂನ್ ಮಾಹೆಯಿಂದ ಜನವರಿ ಅವಧಿಯವರೆಗೆ ನೀರು ಬಿಟ್ಟಿದ್ದರೆ ಸಮರ್ಪಕವಾಗಿ ಬಳಸಬಹುದಿತ್ತು. ಅದು ಬಿಟ್ಟು ಸೆಪ್ಟೆಂಬರ್, ಅಕ್ಟೋಬರ್ ಅಕಾಲದಲ್ಲಿ ನೀರು ಬಿಡುಗಡೆ ಮಾಡುತ್ತಿದ್ದರಿಂದ ನೀರಿನ ಪೂರ್ಣ ಸದ್ಬಳಕೆ ಸಾಧ್ಯವಾಗುತ್ತಿರಲಿಲ್ಲ. ಹಾಸನ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಜಿಲ್ಲೆಗೆ ನೀರನ್ನು ಹರಿಸುವ ಪ್ರಯತ್ನ ಮಾಡಿದ್ದೇನೆ. ಹೇಮಾವತಿ ಜಲಾಶಯಕ್ಕೆ ಒಳಹರಿವು ಇಲ್ಲದಿರುವುದರಿಂದ ಆತಂಕವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ನೀರು ಹರಿಸುವ ಬಗ್ಗೆ ಜೂನ್ 9ರಂದು ನಡೆಯಲಿರುವ ನೀರಾವರಿ ಪ್ರಾಧಿಕಾರದ ಸಭೆಯಲ್ಲಿ ಸಮಿತಿ ಅಂತಿಮ ನಿರ್ಣಯ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News