ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದರಲ್ಲಿ ಬಿ.ಎಲ್.ಸಂತೋಷ್ ಪಾತ್ರವಿದೆ: ಸಚಿವ ಸಿ.ಟಿ.ರವಿ

Update: 2020-06-09 10:38 GMT

ಬೆಂಗಳೂರು, ಜೂ. 9: ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಲು ಹಾಗೂ ರಾಜ್ಯಸಭಾ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಪಾತ್ರವಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಇಂದಿಲ್ಲಿ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಕ್ಷದ ಮುಖಂಡ ಬಿ.ಎಲ್.ಸಂತೋಷ್ ನಮ್ಮ ರಾಷ್ಟ್ರೀಯ ನಾಯಕರು. ಪಕ್ಷದ ಎಲ್ಲರೂ ಅವರನ್ನು ಒಪ್ಪಿಕೊಂಡಿದ್ದಾರೆ. ಯಡಿಯೂರಪ್ಪನವರು, ಸಂತೋಷ್ ನಾಯಕತ್ವವನ್ನು ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾರಾ? ಎಂದು ಖಾರವಾಗಿ ಪ್ರಶ್ನಿಸಿದರು.

ಸಂತೋಷ್ ನಾಯಕತ್ವವನ್ನು ಯಾರೂ ಒಪ್ಪುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲರೂ ಅವರನ್ನು ಒಪ್ಪಿಕೊಂಡಿದ್ದಾರೆ. ಪಕ್ಷ ಇಬ್ಬರು ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಹೈಕಮಾಂಡ್ ರಾಜ್ಯಸಭಾ ಟಿಕೆಟ್ ನೀಡಿದೆ. ಹೈಕಮಾಂಡ್ ನಿರ್ಧಾರವನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಸಿ.ಟಿ.ರವಿ ತಿಳಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪನವರೇ ನಮ್ಮ ನಾಯಕರು. ಅವರ ನೇತೃತ್ವದಲ್ಲಿ ಚುನಾವಣೆಗಳನ್ನು ಎದುರಿಸಿದ್ದೆವು. ನಾಯಕತ್ವ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಯಡಿಯೂರಪ್ಪ ಮತ್ತು ಸಂತೋಷ್ ಇಬ್ಬರು ನಮ್ಮ ಪಕ್ಷದ ನಾಯಕರು ಎಂದು ರವಿ ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News