ಜೆಡಿಎಸ್‍ನಿಂದ ದೇವೇಗೌಡ, ಬಿಜೆಪಿಯ ಈರಣ್ಣ ಕಡಾಡಿ, ಅಶೋಕ್ ಗಸ್ತಿ ನಾಮಪತ್ರ ಸಲ್ಲಿಕೆ

Update: 2020-06-09 14:36 GMT

ಬೆಂಗಳೂರು, ಜೂ. 9: ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಇಂದು ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಬಿಜೆಪಿಯ ಈರಣ್ಣ ಕಡಾಡಿ ಹಾಗೂ ಅಶೋಕ್ ಗಸ್ತಿ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದರು.

ಮಂಗಳವಾರ ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ಜೆಡಿಎಸ್ ವರಿಷ್ಟ ದೇವೇಗೌಡ ಮತ್ತು ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಪ್ರತ್ಯೇಕವಾಗಿ ತೆರಳಿ ವಿಧಾನಸಭೆಯ ಕಾರ್ಯದರ್ಶಿಯೂ ಆಗಿರುವ ಚುನಾವಣಾಧಿಕಾರಿ ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಎಚ್.ಡಿ.ದೇವೇಗೌಡರು ಪಕ್ಷದ ಕಚೇರಿ ಜೆ.ಪಿ. ಭವನಕ್ಕೆ ಭೇಟಿ ನೀಡಿ ಪಕ್ಷದ ಬಿ.ಫಾರ್ಮ್ ಪಡೆದುಕೊಂಡರು. ಉಮೇದುವಾರಿಕೆ ಸಲ್ಲಿಕೆ ವೇಳೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ, ಶಾಸಕರಾದ ಎಚ್.ಡಿ.ರೇವಣ್ಣ, ಬಂಡೆಪ್ಪ ಕಾಂಶಪೂರ, ವೆಂಕಟರಾವ್ ನಾಡಗೌಡ ಹಾಜರಿದ್ದರು.

ಬಿಜೆಪಿ ಅಭ್ಯರ್ಥಿಗಳಾದ ಅಶೋಕ ಗಸ್ತಿ ಹಾಗೂ ಈರಣ್ಣ ಕಡಾಡಿ ಅವರು ಮೊದಲಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನ ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಇಬ್ಬರು ಆಶೀರ್ವಾದ ಪಡೆದರು. ಬಳಿಕ ಬಿಜೆಪಿ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷ ನಳೀನ್ ಕುಮಾರ್ ಕಟೀಲುರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಅನಂತರ ವಿಧಾನಸೌಧಕ್ಕೆ ಮುಖಂಡರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ನಿನ್ನೆ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಸಿದ್ದಾರೆ. ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜೂ.19ರಂದು ಚುನಾವಣೆ ನಡೆಯಲಿದೆ. ದೇವೇಗೌಡರಿಗೆ ಬೆಂಬಲ ವ್ಯಕ್ತಪಡಿಸಿರುವ ಕಾಂಗ್ರೆಸ್ ಎರಡನೆ ಅಭ್ಯರ್ಥಿ ಹಾಕುವುದಿಲ್ಲವೆಂದು ಸ್ಪಷ್ಟಪಡಿಸಿದೆ. ಈ ಮಧ್ಯೆ ಬಿಜೆಪಿ ಮೂರನೆ ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವ ತೀರ್ಮಾನಿಸಿದ್ದು ಪರೋಕ್ಷವಾಗಿ ದೇವೇಗೌಡರಿಗೆ ಬೆಂಬಲ ಸೂಚಿಸಿದೆ.

ಪಕ್ಷೇತರ ಅಭ್ಯರ್ಥಿ ಅಖಾಡಕ್ಕೆ: ರಾಜ್ಯಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸಂಗಮೇಶ ಚಿಕ್ಕನರಗುಂದ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಳೆ (ಜೂ.10) ನಾಮಪತ್ರ ಪರಿಶೀಲನೆ ನಡೆಯಲಿದ್ದು, ಜೂ.12ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ನಾಮಪತ್ರ ಪರಿಶೀಲನೆ ಬಳಿಕ ಕಣದಲ್ಲಿ ಐವರು ಅಭ್ಯರ್ಥಿಗಳು ಉಳಿದರೆ ಚುನಾವಣೆ ನಡೆಸುವುದು ಅನಿವಾರ್ಯವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News