ಶಿವಮೊಗ್ಗ: ಮೂವರು ಪೊಲೀಸರು ಕೊರೋನ ಸೋಂಕಿನಿಂದ ಗುಣಮುಖ
Update: 2020-06-09 17:31 IST
ಶಿವಮೊಗ್ಗ, ಜೂ.9: ಕೊರೋನ ಸೋಂಕಿಗೆ ತುತ್ತಾಗಿ, ಬಳಿಕ ಚಿಕಿತ್ಸೆ ಪಡೆದು ಗುಣಮುಖರಾದ ಹಿನ್ನೆಲೆಯಲ್ಲಿ ಮೂವರು ಪೊಲೀಸರನ್ನು ಮಂಗಳವಾರ ಮೆಗ್ಗಾನ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಬೆಂಗಳೂರಿಗೆ ಬಂದೋಬಸ್ತ್ ಕಾರ್ಯಕ್ಕೆ ತೆರಳಿದ್ದ ಕೆಎಸ್‌ಆರ್‌ಪಿ ಪೊಲೀಸರಿಗೆ ಸೋಂಕು ತಗುಲಿತ್ತು. ಇಂದು ಬೆಳಗ್ಗೆ ತಪಾಸಣೆ ನಡೆಸಿದ ಸಂದರ್ಭದಲ್ಲಿ ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಸರ್ಜನ್ ಡಾ.ರಘುನಂದನ್ ತಿಳಿಸಿದ್ದಾರೆ.
ಇವರನ್ನು ಆಸ್ಪತ್ರೆಯ ಆಂಬುಲೆನ್ಸ್ ಮೂಲಕ ಮನೆಗೆ ಬಿಟ್ಟು ಬರಲಾಗಿದ್ದು, ಗುಣಮುಖರಾಗಿದ್ದರೂ ಇವರು ಹೋಂ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಈ ವರೆಗೆ ಒಟ್ಟು 31 ಜನ ಗುಣಮುಖರಾಗಿದ್ದು, 42 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಾ. ರಘುನಂದನ್ ತಿಳಿಸಿದ್ದಾರೆ.