ಮಂಡ್ಯ: ಬೆಂಕಿ ಬಿದ್ದು 12 ಗುಡಿಸಲುಗಳು ಭಸ್ಮ: ಕಿಡಿಗೇಡಿಗಳ ಕೃತ್ಯ ಶಂಕೆ
ಮಂಡ್ಯ, ಜೂ.9: ಆಕಸ್ಮಿಕ ಬೆಂಕಿ ಬಿದ್ದು 12 ಗುಡಿಸಲು ಭಸ್ಮವಾಗಿರುವ ಘಟನೆ ತಾಲೂಕಿನ ಕೀಲಾರ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದ್ದು, ಗುಡಿಸಲು ವಾಸಿಗಳು ಬೀದಿಪಾಲಾಗಿದ್ದಾರೆ.
ಮೊದಲು ಒಂದು ಗುಡಿಸಲಿಗೆ ಬಿದ್ದ ಬೆಂಕಿ, ಪಕ್ಕದ ಇತರ ಗುಡಿಸಲುಗಳನ್ನು ವ್ಯಾಪಿಸಿದೆ. ಅಗ್ನಿಶಾಮಕ ದಳದ ಜತೆ, ಗ್ರಾಮಸ್ಥರು ಪ್ರಯತ್ನಿಸಿದರೂ ಬೆಂಕಿನಂದಿಸಲು ಸಾಧ್ಯವಾಗಲಿಲ್ಲವೆಂದು ವರದಿಯಾಗಿದೆ.
ಧರ್ಮಲಿಂಗ, ಲಕ್ಷ್ಮಿ, ನಾಗರಾಜು, ಆನಂದ, ರಾಮಿ, ಮುನಿಯ, ಸೆಡಿಯ, ಅಣ್ಣಾದೊರೆ ಸೇರಿ ಇತರರ ಗುಡಿಸಲಿನಲ್ಲಿದ್ದ ಬಟ್ಟೆ, ಆಹಾರ ಪದಾರ್ಥಗಳು ಬೆಂಕಿಗಾಹುತಿಯಾಗಿವೆ. ಸುಮಾರು 7 ಲಕ್ಷ ರೂ. ನಷ್ಟು ನಷ್ಟವಾಗಿದೆ ಎನ್ನಲಾಗಿದೆ.
ಘಟನೆ ಸಂಬಂಧ ಕೆರಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2018ರಲ್ಲಿ ಇಲ್ಲಿ ನಡೆದ ಅಗ್ನಿ ದುರಂತದಲ್ಲಿ ಸುಮಾರು 20 ಮೇಕೆಗಳು ಮೃತಪಟ್ಟಿದ್ದವು. ಗುಡಿಸಲು ವಾಸಿಗಳನ್ನು ಒಕ್ಕಲೆಬ್ಬಿಸಲು ಕೆಲವು ದುಷ್ಕರ್ಮಿಗಳು ಈ ಕೃತ್ಯವೆಸಗಿರಬಹುದು ಎಂಬ ಆರೋಪ ಕೇಳಿಬರುತ್ತಿದೆ. ಈ ನಿವಾಸಿಗಳಿಗೆ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಡುವ ಜಿಲ್ಲಾಡಳಿತ ನೀಡಿದ್ದ ಭರವಸೆಯೂ ಈಡೇರಿಲ್ಲ ಎನ್ನಲಾಗಿದೆ.