ಡಿಕೆಶಿ ಪದಗ್ರಹಣ ‘ಪತ್ರಿಜ್ಞಾ’ ಕಾರ್ಯಕ್ರಮಕ್ಕೆ ರಾಜ್ಯ ಸರಕಾರ ಅವಕಾಶ ನಿರಾಕರಣೆ

Update: 2020-06-09 14:33 GMT

ಬೆಂಗಳೂರು, ಜೂ.9: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಜೂ.14ರಂದು ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಪದಗ್ರಹಣ ಮಾಡಲು ಆಯೋಜಿಸಲಾಗಿರುವ ‘ಪ್ರತಿಜ್ಞಾ’ ಕಾರ್ಯಕ್ರಮಕ್ಕೆ ರಾಜ್ಯ ಸರಕಾರ ಅವಕಾಶ ನಿರಾಕರಿಸಿದೆ.

ಕೆಪಿಸಿಸಿ ಕಚೇರಿಯಲ್ಲಿ 150 ಜನ ಪ್ರಮುಖರ ಸಮ್ಮುಖದಲ್ಲಿ ಜೂ.14ರಂದು ಪದಗ್ರಹಣ ನಡೆಸಲು ಅವಕಾಶ ಕೋರಿ ಜೂ.5ರಂದು ಮುಖ್ಯಮಂತ್ರಿ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಶಿವಕುಮಾರ್ ಮನವಿ ಮಾಡಿದ್ದರು.

ಡಿ.ಕೆ.ಶಿವಕುಮಾರ್ ಬರೆದಿರುವ ಪತ್ರಕ್ಕೆ ಉತ್ತರಿಸಿರುವ ಕಂದಾಯ ಇಲಾಖೆಯ(ವಿಪತ್ತು ನಿರ್ವಹಣೆ) ಸರಕಾರದ ಪ್ರಧಾನ ಕಾರ್ಯದರ್ಶಿ ನಾಗರಾಜು ಎಸ್., ಕೇಂದ್ರ ಗೃಹ ಮಂತ್ರಾಲಯವು ಲಾಕ್‍ಡೌನ್ ಅವಧಿಯನ್ನು ಮೇ 31 ರಿಂದ ಜೂ.30ರವರೆಗೆ ವಿಸ್ತರಿಸಿ, ಈ ಅವಧಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಮಾರ್ಗಸೂಚಿಯನ್ನು ಹೊರಡಿಸಿದೆ. ಈ ಮಾರ್ಗಸೂಚಿಯನ್ನು ಯಥಾವತ್ತಾಗಿ ರಾಜ್ಯ ಸರಕಾರವು ಅನುಷ್ಠಾನಗೊಳಿಸಿ ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ.

ಅದರನ್ವಯ ಮದುವೆ ಸಮಾರಂಭಗಳಲ್ಲಿ 50ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಅಂತ್ಯಸಂಸ್ಕಾರದಲ್ಲಿ 20ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಅಲ್ಲದೆ, ಸಾಮಾಜಿಕ, ರಾಜಕೀಯ, ಕ್ರೀಡಾ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಸಭೆ ಸಮಾರಂಭಗಳಿಗೆ ಇನ್ನೂ ಅವಕಾಶ ಕಲ್ಪಿಸಲಾಗಿಲ್ಲ ಎಂದು ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ. ಆದುದರಿಂದ, ಕೇಂದ್ರ ಸರಕಾರದ ಮಾರ್ಗಸೂಚಿಯನುಸಾರ ತಮ್ಮ ಕೋರಿಕೆಯನ್ನು ಪರಿಗಣಿಸಲು ಸಾಧ್ಯವಿಲ್ಲವೆಂದು ತಮಗೆ ತಿಳಿಸಲು ನಿರ್ದೇಶಿಸಲ್ಪಟ್ಟಿದ್ದೇನೆ ಎಂದು ನಾಗರಾಜು ಹೇಳಿದ್ದಾರೆ.

ಬಿಜೆಪಿಯ ಸೇಡಿನ ರಾಜಕಾರಣ

ಪ್ರತಿಜ್ಞಾ ದಿನ ಕಾರ್ಯಕ್ರಮವನ್ನು ಜೂ.14ರಂದು ರಾಜ್ಯದ 7800 ಸ್ಥಳಗಳಲ್ಲಿ ನಡೆಸಲಾಗುತ್ತಿದ್ದು, ಸುಮಾರು 10 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳುತ್ತಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಸೇರಿ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ ಪುನಃ ಅನುಮತಿ ನಿರಾಕರಿಸುವ ಮೂಲಕ ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News