ರಾಜ್ಯದಲ್ಲಿ ಎಸೆಸೆಲ್ಸಿ ಪರೀಕ್ಷೆ ರದ್ದು ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ

Update: 2020-06-09 14:50 GMT

ಬೆಂಗಳೂರು, ಜೂ.9: ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಎಸೆಸೆಲ್ಸಿ ಪರೀಕ್ಷೆ ನಡೆಸಲು ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿದೆ.

ಕೊರೋನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆಯನ್ನು ರದ್ದುಪಡಿಸಲು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ, ನ್ಯಾಯಪೀಠವು ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಪರೀಕ್ಷೆ ನಡೆಸಿ ಎಂದು ಆದೇಶ ನೀಡಿದೆ. ಆದರೆ, ಈ ಆದೇಶವನ್ನು ಪ್ರಶ್ನಿಸಿ ಬೆಳಗಾವಿ ನಿವಾಸಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆ ಮುಖ್ಯಸ್ಥೆ ರಾಜಶ್ರೀ ನಾಗರಾಜ ಅವರು ಸುಪ್ರೀಂಕೋರ್ಟ್ ಗೆ ವಿಶೇಷ ಮನವಿ ಅರ್ಜಿ(ಎಸ್‍ಎಲ್‍ಪಿ) ಸಲ್ಲಿಸಿದ್ದಾರೆ. ಪರೀಕ್ಷೆ ನಡೆಸಲು ತೀರ್ಮಾನಿಸುವ ಮೂಲಕ ಸರಕಾರ ವಿದ್ಯಾರ್ಥಿಗಳು, ಅವರ ಪೋಷಕರು ಮತ್ತು ಶಿಕ್ಷಕರ ಜೀವನವನ್ನು ಅಪಾಯಕ್ಕೆ ಸಿಲುಕಿಸಿದ್ದು, ಹೈಕೋರ್ಟ್ ಕೂಡ ತನ್ನ ತೀರ್ಪಿನಲ್ಲಿ ಇಂತಹ ಸೂಕ್ಷ್ಮ ವಿಚಾರಗಳನ್ನು ಪರಿಗಣಿಸಲು ನಿರಾಕರಿಸಿದೆ ಎಂದಿದ್ದಾರೆ.

ಪರೀಕ್ಷೆ ನಡೆಸುವುದಕ್ಕೆ ಮುಂಜಾಗ್ರತಾ ಕ್ರಮವಾಗಿ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮಾರ್ಗಸೂಚಿಗಳನ್ನು(ಎಸ್‍ಓಪಿ) ರೂಪಿಸಿದೆ. ಪರೀಕ್ಷಾ ಕೇಂದ್ರದಲ್ಲಿ ಮಾಸ್ಕ್-ಸ್ಯಾನಿಟೈಸರ್, ಆರೋಗ್ಯ ತಪಾಸಣೆ, ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ, ಪರೀಕ್ಷೆ ಬರೆಯುವ ವೇಳೆ ವಿದ್ಯಾರ್ಥಿಗಳ ನಡುವೆ ಸುರಕ್ಷಿತ ಅಂತರ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದರೂ ಅಪಾಯದ ಭೀತಿ ಇರುತ್ತದೆ. ಇದು ಅಪ್ರಾಪ್ತರ ಬದುಕುವ ಹಕ್ಕಿನ ಉಲ್ಲಂಘನೆಯಾಗಲಿದೆ ಎಂದು ಎಸ್‍ಎಲ್‍ಪಿ ಅರ್ಜಿಯಲ್ಲಿ ತಿಳಿಸಿದ್ದಾರೆ.

ಹೈಕೋರ್ಟ್ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕು. ಜೂ.25ಕ್ಕೆ ನಿಗದಿಯಾಗಿರುವ ಪರೀಕ್ಷೆಗಳನ್ನು ನಡೆಸದಂತೆ ಎಸೆಸೆಲ್ಸಿ ಪರೀಕ್ಷಾ ಮಂಡಳಿ ಮತ್ತು ರಾಜ್ಯ ಸರಕಾರಕ್ಕೆ ಸೂಚನೆ ನೀಡಬೇಕು. ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನ ಮತ್ತು ಪೂರ್ವಭಾವಿ ಪರೀಕ್ಷಾ ಫಲಿತಾಂಶವನ್ನು ಪರಿಗಣಿಸಿ ಅಂತಿಮ ಫಲಿತಾಂಶ ನೀಡುವಂತೆ ನಿರ್ದೇಶನ ನೀಡಿ ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News