ಕಲಬುರಗಿ: ಹುಚ್ಚು ನಾಯಿ ಕಡಿದು ಬಾಲಕನ ಸ್ಥಿತಿ ಗಂಭೀರ
Update: 2020-06-09 20:52 IST
ಕಲಬುರಗಿ, ಜೂ.9: ಹುಚ್ಚು ನಾಯಿ ಕಡಿದ ಪರಿಣಾಮ ಐದು ವರ್ಷದ ಬಾಲಕನೋರ್ವ ಗಂಭೀರ ಗಾಯಗೊಂಡ ಘಟನೆ ಶಹಾಬಾದ ತಾಲೂಕಿನ ಹೊನಗುಂಟಾ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಬೆಳಗ್ಗೆ ಮನೆಯ ಹೊರಗೆ ಆಟವಾಡುತ್ತಿದ್ದ ಗಂಗಾರಾಜ ಶರಣಪ್ಪ ಬಾಗೋಡಿ ಎಂಬ ಬಾಲಕನ ತಲೆ, ಗಲ್ಲ ಹಾಗೂ ತುಟಿಗೆ ಹುಚ್ಚು ನಾಯಿ ಕಚ್ಚಿದ್ದು, ಬಾಲಕನಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಕೂಡಲೇ ಬಾಲಕನಿಗೆ ಪ್ರಥಮ ಚಿಕಿತ್ಸೆ ನೀಡಿ, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ ಇನ್ನೂ ಮೂರು ಮಂದಿಯ ಕಾಲು ಹಾಗೂ ದನಗಳಿಗೂ ನಾಯಿ ಕಚ್ಚಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಗ್ರಾಮದಲ್ಲಿ ಹುಚ್ಚುನಾಯಿ ಕಾಟವನ್ನು ತಪ್ಪಿಸಬೇಕು. ಗ್ರಾಪಂ ಅಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಹುಚ್ಚು ನಾಯಿಯನ್ನು ಹಿಡಿದು, ಗ್ರಾಮಸ್ಥರ ಆತಂಕ ದೂರ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.