ಶಾಲಾ ಪ್ರಾರಂಭದ ಕುರಿತು ಪೋಷಕರ ಅಭಿಪ್ರಾಯ ದಾಖಲು ಕಡ್ಡಾಯ: ಶಿಕ್ಷಣ ಇಲಾಖೆ
Update: 2020-06-09 22:35 IST
ಬೆಂಗಳೂರು, ಜೂ.9: ಶಾಲೆಗಳನ್ನು ಆರಂಭಿಸುವುದರ ಕುರಿತು ಶಾಲಾ ಮುಖ್ಯಶಿಕ್ಷಕರ ಅಧ್ಯಕ್ಷತೆಯಲ್ಲಿ ನಡೆಯುವ ಪೋಷಕರ ಸಭೆಯಲ್ಲಿ ಪೋಷಕರ ಅಭಿಪ್ರಾಯವನ್ನು ದಾಖಲು ಮಾಡುವುದು ಕಡ್ಡಾಯವೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ.
ಶಾಲೆಗಳಲ್ಲಿ ಪೋಷಕರ ಸಭೆ ನಡೆಯುವ ದಿನ ಇಲಾಖೆ ವತಿಯಿಂದ ಕಡ್ಡಾಯವಾಗಿ ಒಬ್ಬರು ಸಭೆಯಲ್ಲಿ ಹಾಜರಿದ್ದು, ಪೋಷಕರು ಶಾಲೆ ಆರಂಭ ಮಾಡುವ ಬಗ್ಗೆ ನೀಡುವ ಅಭಿಪ್ರಾಯ, ನಿರ್ಣಯಗಳನ್ನು ದಾಖಲಾಗುತ್ತಿದೆಯೇ ಎಂಬ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು.
ಶಾಲೆಗಳ ಆರಂಭದ ಕುರಿತು ಪೋಷಕರ ಸಭೆಗಳನ್ನು ನಡೆಸಲು ಜೂ.12ರವರೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಇದನ್ನು ಜೂ.20ರವರೆಗೆ ವಿಸ್ತರಿಸಲಾಗಿದೆ. ಈ ವೇಳೆ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪೋಷಕರ ಸಂಖ್ಯೆಗೆ ಅನುಗುಣವಾಗಿ ತಂಡಗಳನ್ನಾಗಿ ವಿಂಗಡಿಸಿ ಸಭೆಯನ್ನು ಹಮ್ಮಿಕೊಳ್ಳುವುದು ಸೂಕ್ತವೆಂದು ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.