ವಲಸೆ ಕಾರ್ಮಿಕರು ಸೇರಿದಂತೆ ದೇಶದಲ್ಲಿ ಯಾರೊಬ್ಬರೂ ಆಹಾರವಿಲ್ಲದೆ ಸಾವನ್ನಪ್ಪಿಲ್ಲ: ನಳಿನ್ ಕುಮಾರ್ ಕಟೀಲು

Update: 2020-06-10 11:59 GMT

ಕಲಬುರಗಿ, ಜೂ. 10: ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಬಿಜೆಪಿ ಅವಕಾಶ ನೀಡಿದೆ. ಒಂದು ರಾಜಕೀಯ ಪಕ್ಷವಾಗಿ ಏನೆಲ್ಲಾ ಮಾಡಬಹುದು ಎಂಬುದನ್ನು ಬಿಜೆಪಿ ಇತರೆ ರಾಜಕೀಯ ಪಕ್ಷಗಳಿಗೆ ತೋರಿಸಿಕೊಟ್ಟಿದೆ. ಇದೇ ರೀತಿಯ ಅಚ್ಚರಿಯೂ ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊತ್ತಾಗಲಿದೆ, ಅಲ್ಲಿಯವರೆಗೂ ಕಾದುನೋಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.

ಬುಧವಾರ ಜಿಲ್ಲೆಯ ಸೇಡಂನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪರಿಷತ್ತಿಗೆ ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ಸಾಮಾಜಿಕವಾಗಿ ಮತ್ತು ಭೌಗೋಳಿಕವಾಗಿ ಎಲ್ಲ ಅಂಶಗಳನ್ನು ಪರಿಗಣಿಸಿ ಅರ್ಹರಿಗೆ ಪಕ್ಷ ಸ್ಥಾನಮಾನ ನೀಡಲಿದೆ. ಅದು ಮುಖಂಡರಿಗೋ ಅಥವಾ ಸಾಮಾನ್ಯ ಕಾರ್ಯಕರ್ತರಿಗೋ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ನಿರಾಕರಿಸಿದರು.

ಆಹಾರವಿಲ್ಲದೆ ಯಾರೂ ಸಾವನ್ನಪ್ಪಿಲ್ಲ: ಕೊರೋನ ವೈರಸ್ ಸೋಂಕಿನ ಪರಿಸ್ಥಿತಿಯನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಅತ್ಯಂತ ಸಮರ್ಥವಾಗಿ ನಿಭಾಯಿಸಿದೆ. ಇಡೀ ವಿಶ್ವವೇ ಭಾರತದ ಕ್ರಮವನ್ನು ಕೊಂಡಾಡಿದೆ. ಆದರೆ, ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಮಾತ್ರ ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ವಲಸೆ ಕಾರ್ಮಿಕರು ಸೇರಿದಂತೆ ದೇಶದಲ್ಲಿ ಯಾರೊಬ್ಬರೂ ಆಹಾರವಿಲ್ಲದೆ ಸಾವನ್ನಪ್ಪಿದ ಉದಾಹರಣೆಗಳಿಲ್ಲ. ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಬಸ್ ಮತ್ತು ರೈಲ್ವೆ ವ್ಯವಸ್ಥೆಗಳನ್ನು ಸರಕಾರವೇ ಮುಂದೆ ನಿಂತು ಕಲ್ಪಿಸಿದೆ. ಅಲ್ಲದೆ, ಅವರಿಗೆ ಆಹಾರವನ್ನು ಒದಗಿಸಿದೆ ಎಂದು ಕಟೀಲು ಹೇಳಿದರು.

ಕೊರೋನ ಸೋಂಕಿಗೆ ಯಾವುದೇ ಒಂದು ಜಾತಿ, ಧರ್ಮವೆಂದು ಗೊತ್ತಿಲ್ಲ. ಅದು ಒಂದು ವೈರಸ್. ಎಲ್ಲರಿಗೂ ಬರುತ್ತದೆ. ಹೀಗಾಗಿ ಎಲ್ಲರೂ ಮುನ್ನಚ್ಚರಿಕೆ ವಹಿಸುವುದು ಬಹಳ ಮುಖ್ಯ. ಆ ದೃಷ್ಟಿಯಿಂದ ಪ್ರಧಾನಿ ಮೋದಿ ಸೂಕ್ತ ಸಂದರ್ಭದಲ್ಲಿ ಲಾಕ್‍ಡೌನ್ ಘೋಷಣೆ ಮಾಡಿದ್ದು, ಎಲ್ಲರೂ ಸರಕಾರದ ಮಾರ್ಗಸೂಚಿಯನ್ನು ಅನುಸರಿಸಬೇಕು ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News