ಗೆದ್ದು ತಲೆ ತಿರುಗಿಲ್ಲ, ಸೋತಿದ್ದೇವೆಂದು ಕುಗ್ಗಿಲ್ಲ: ಮಾಜಿ ಸಿಎಂ ಕುಮಾರಸ್ವಾಮಿ
ಬೆಂಗಳೂರು, ಜೂ.10: ನಾವು ಎಂದೂ ಗೆದ್ದು ತಲೆತಿರುಗಿಲ್ಲ. ಹಾಗೆಯೇ ಸೋತಿದ್ದೇವೆಂದು ಕುಗ್ಗಿಲ್ಲ. ಜನರ ಸೇವೆಗಾಗಿಯೇ ಇರುವ ಕುಟುಂಬ ನಮ್ಮದು. ಹೀಗಾಗಿಯೇ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಚನ್ನಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇವೇಗೌಡರ ರಾಜ್ಯಸಭೆ ಪ್ರವೇಶ ದೇವರ ಇಚ್ಛೆ. ಅವರು ಈ ಹಿಂದೆಯೇ ಲೋಕಸಭೆಯಲ್ಲೆ ರಾಜಕಾರಣಕ್ಕೆ ವಿದಾಯ ಹೇಳಿದ್ದರು. ಇದೇ ನನ್ನ ಕೊನೆಯ ಭಾಷಣ ಎಂದಿದ್ದರು. ಆದರೆ, ಜನರು ಮತ್ತು ಪಕ್ಷದ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ, ಅಲ್ಲಿನ ಜನತೆ ಅವರನ್ನು ಸೋಲಿಸಿದರು.
ಇದೀಗ ಅವರ ಅನುಭವದ ದೃಷ್ಟಿಯಿಂದ ರಾಜ್ಯಸಭೆಗೆ ಆಯ್ಕೆಯಾಗುತ್ತಿದ್ದಾರೆ. ಕರ್ನಾಟಕ ರಾಜ್ಯದ ಸಮಸ್ಯೆಗಳ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಮುಂದೆ ಗಟ್ಟಿಧ್ವನಿಯೊಂದು ಅಗತ್ಯವಿದೆ. ಹೀಗಾಗಿ ದೇವೇಗೌಡರು ರಾಜ್ಯಸಭೆ ಪ್ರವೇಶ ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ವೈಯಕ್ತಿಕ ರಾಜಕೀಯ ಉದ್ದೇಶವಿಲ್ಲ ಎಂದು ಕುಮಾರಸ್ವಾಮಿ ಇದೇ ವೇಳೆ ಸ್ಪಷ್ಟನೆ ನೀಡಿದರು.