×
Ad

ರಾಜ್ಯದಲ್ಲಿ ಕೊರೋನ ವೈರಸ್ ಗೆ ಮತ್ತೆ ಮೂವರು ಬಲಿ: 6 ಸಾವಿರದ ಗಡಿ ದಾಟಿದ ಸೋಂಕಿತರ ಸಂಖ್ಯೆ

Update: 2020-06-10 18:31 IST

ಬೆಂಗಳೂರು, ಜೂ.10: ಕರ್ನಾಟಕದಲ್ಲಿ ಒಂದೇ ದಿನ ಮತ್ತೆ 120 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 6,041ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಎರಡು ಮತ್ತು ಧಾರವಾಡ ಜಿಲ್ಲೆಯಲ್ಲಿ ಒಂದು ಸಾವು ಸಂಭವಿಸಿದ್ದು, ಒಟ್ಟು ಸಾವಿನ ಸಂಖ್ಯೆ 69ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇಂದು ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ಮಂಗಳವಾರ ಸಂಜೆ 5 ಗಂಟೆಯಿಂದ ಬುಧವಾರ ಸಂಜೆ 5 ಗಂಟೆವರೆಗೆ ಮೂರು ಸಾವು, 120 ಕೋವಿಡ್ ಪ್ರಕರಣಗಳು ಪಾಸಿಟಿವ್ ಬಂದಿರುವುದಾಗಿ ಮಾಹಿತಿ ನೀಡಲಾಗಿದೆ.

ಬೆಂಗಳೂರು ನಗರ ಜಿಲ್ಲೆಯ 57 ವರ್ಷದ ಪುರುಷರೊಬ್ಬರು ಜ್ವರ ಮತ್ತು ಕೆಮ್ಮಿನ ಕಾರಣದಿಂದ ಜೂ.8 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅಂದೇ ಅವರು ಮೃತಪಟ್ಟಿದ್ದಾರೆ. ಅವರ ಕೊರೋನ ವರದಿಯು ಇಂದು ಪಾಸಿಟಿವ್ ಬಂದಿದೆ. ಬೆಂಗಳೂರು ನಗರ ಜಿಲ್ಲೆಯ 32 ವರ್ಷದ ಪುರುಷರೊಬ್ಬರು ಜೂ.10 ರಂದು ಮೃತಪಟ್ಟಿದ್ದಾರೆ. ಧಾರವಾಡ ಜಿಲ್ಲೆಯ 58 ವರ್ಷದ ಪುರುಷರೊಬ್ಬಳು ಮೇ.23ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜೂ.9 ರಂದು ಮೃತಪಟ್ಟಿದ್ದಾರೆ.

ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 42, ಯಾದಗಿರಿ 27, ವಿಜಯಪುರ 13, ಕಲಬುರಗಿ 11, ಬೀದರ್ 5, ದಕ್ಷಿಣ ಕನ್ನಡ ಮತ್ತು ಧಾರವಾಡದಲ್ಲಿ ತಲಾ 4, ದಾವಣಗೆರೆ, ಹಾಸನ ಮತ್ತು ಬಳ್ಳಾರಿಯಲ್ಲಿ ತಲಾ 3, ಬಾಗಲಕೋಟೆ ಮತ್ತು ರಾಮನಗರದಲ್ಲಿ ತಲಾ 2, ಬೆಳಗಾವಿಯಲ್ಲಿ ಒಂದು ಪ್ರಕರಣ ಪಾಸಿಟಿವ್ ಬಂದಿದೆ.

ಒಟ್ಟಾರೆ ರಾಜ್ಯದಲ್ಲಿ 6,041 ಕೊರೋನ ಸೋಂಕಿತರ ಪೈಕಿ 2,862 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 257 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 69 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 3,108 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News