×
Ad

ರಾಜ್ಯದಲ್ಲಿ ಇದುವರೆಗೆ ನಾಲ್ಕು ಲಕ್ಷ ಮಂದಿಗೆ ಕೊರೋನ ಪರೀಕ್ಷೆ: ಸಚಿವ ಡಾ.ಸುಧಾಕರ್

Update: 2020-06-10 19:18 IST

ಬೆಂಗಳೂರು, ಜೂ.10: ರಾಜ್ಯದಲ್ಲಿ ಇದುವರೆಗೆ 4 ಲಕ್ಷಕ್ಕೂ ಅಧಿಕ ಮಂದಿಗೆ ಕೊರೋನ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಮಂಗಳವಾರ ತನಕ 4 ಲಕ್ಷದ 257 ಮಂದಿಗೆ ರಾಜ್ಯದ 71 ಪರೀಕ್ಷಾ ಪ್ರಯೋಗಾಲಯಗಳಲ್ಲಿ ಮಾದರಿಯನ್ನು ಸಂಗ್ರಹಿಸಿ ಪರೀಕ್ಷಿಸಲಾಗಿದೆ. ರಾಜ್ಯದಲ್ಲಿ 5,921 ಮಂದಿಗೆ ಸೋಂಕು ತಗುಲಿದ್ದು ಈ ಪೈಕಿ 2,605 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸೋಂಕಿನಿಂದ ಚೇತರಿಕೆ ಪ್ರಮಾಣ ಶೇ. 44 ರಷ್ಟಿದೆ ಎಂದೂ ಅವರು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

ಸೋಂಕಿನಿಂದ ಸಾವನ್ನಪ್ಪಿದವರ ಪ್ರಮಾಣ ಶೇ.1.4 ರಷ್ಟಿದೆ, ಬೇರೆ ರಾಜ್ಯಗಳಿಗೆ ಹೋಲಿಸಿದರೆ ಇದರ ಪ್ರಮಾಣ ಗಣನೀಯ ಕಡಿಮೆ ಇದೆ. ರಾಜ್ಯದಲ್ಲಿ ಈವರೆಗೆ 3,248 ಸಕ್ರಿಯ ಪ್ರಕರಣಗಳು ಇದ್ದು, 2,605 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಸೋಂಕಿಗೆ ಒಟ್ಟಾರೆ 66 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಹಿಂಬಾಗಿಲ ಮೂಲಕ ರಾಜ್ಯಸಭೆಗೆ: ಸುದೀರ್ಘವಾದ ರಾಜಕೀಯ ಬದುಕಿನ ಬಹುಶಃ ಕೊನೆಯ ಹೋರಾಟದಲ್ಲಿ ಹಿಂಬಾಗಿಲ ಮೂಲಕ ರಾಜ್ಯಸಭೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಹಾಗೂ ಮಲ್ಲಿಕಾರ್ಜುನ ಖರ್ಗೆ ಪ್ರವೇಶಿಸುವುದು ವಿಧಿಯ ಆಟ. ಈ ಮುತ್ಸದ್ದಿಗಳ ಸೇವೆ ಮತ್ತು ಹೋರಾಟ ಅನುಕರಣೀಯ, ದೇವರು ಇಬ್ಬರಿಗೂ ಒಳ್ಳೆಯ ಆರೋಗ್ಯ ಕರುಣಿಸಲಿ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕರ್ನಾಟಕದಲ್ಲಿ ಒಟ್ಟಾರೆ 6,041 ಕೊರೋನ ಸೋಂಕಿನ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ 2,862 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಉಳಿದಂತೆ ಇದುವರೆಗೆ 69 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 3,108 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News