ಚಿಕ್ಕಮಗಳೂರಿಗೂ ಕಾಲಿಟ್ಟ ಮಿಡತೆ ಹಾವಳಿ: ಶೃಂಗೇರಿ ತಾಲೂಕಿನ ಅಡಿಕೆ ತೋಟಗಳಲ್ಲಿ ಮಿಡತೆಗಳ ಹಿಂಡು
ಚಿಕ್ಕಮಗಳೂರು, ಜೂ.10: ಮಿಡಿತೆಗಳ ಹಾವಳಿ ಚಿಕ್ಕಮಗಳೂರಿಗೂ ಕಾಲಿಟ್ಟಿದ್ದು, ಅಡಿಕೆ ಬೆಳಗಾರರು ಇದೀಗ ಮಿಡತೆಗಳ ಹಾವಳಿಯಿಂದ ಬೆಸ್ತುಬಿದ್ದಿದ್ದಾರೆ. ಶೃಂಗೇರಿ ತಾಲೂಕಿನ ತೆಕ್ಕೂರು ಗ್ರಾಮದ ಅಡಿಕೆ ತೋಟಗಳಲ್ಲಿ ಮಿಡತೆಗಳು ಭಾರೀ ಪ್ರಮಾಣದಲ್ಲಿ ಕಂಡು ಬಂದಿದ್ದು, ಅಡಿಕೆ ಮರಗಳ ಎಲೆಗಳನ್ನು ಕ್ಷಣ ಮಾತ್ರದಲ್ಲಿ ತಿಂದು ತೇಗುತ್ತಿವೆ ಎಂದು ತಿಳಿದು ಬಂದಿದೆ.
ಮಲೆನಾಡಿನ ಅಡಿಕೆ ಬೆಳೆಗಾರರು ಕಳೆದ ವರ್ಷ ಸಂಭವಿಸಿದ ಅತೀವೃಷ್ಟಿಯಿಂದ ಇನ್ನೂ ಚೇತರಿಸಿಕೊಂಡಿಲ್ಲ. ಸತತ ಎರಡು ವರ್ಷಗಳಿಂದ ಅತಿವೃಷ್ಟಿಯಾದ ಪರಿಣಾಮ ಅಡಿಕೆ ಬೆಳೆ ಸಂಪೂರ್ಣವಾಗಿ ನೆಲಕಚ್ಚಿದ್ದು, ಇದೀಗ ಲಾಕ್‍ಡೌನ್ ಹಿನ್ನೆಲೆಯಲ್ಲಿ ಅಡಿಕೆ ಕೊಳ್ಳುವವರಿಲ್ಲದೆ ಬೆಳೆಗಾರರು ಕಂಗಾಲಾಗಿದ್ದಾರೆ. ಅಲ್ಲದೇ ಮಲೆನಾಡು ಭಾಗದಲ್ಲಿ ಕಳೆದ ಅನೇಕ ವರ್ಷಗಳಿಂದ ಹಳದಿ ಎಲೆ ರೋಗದಿಂದ ಅಡಿಕೆ ತೋಟಗಳು ಕಣ್ಮರೆಯಾಗುತ್ತಿದ್ದು, ಈ ರೋಗದಿಂದಾಗಿ ಅಡಿಕೆ ಬೆಳೆಗಾರರು ಹೈರಾಣಾಗಿರುವ ಮಧ್ಯೆ ಇದೀಗ ಬೆಳೆಗಾರರು ಮಿಡತೆಗಳ ಹಾವಳಿಯಿಂದಾಗಿ ಕಂಗಾಲಾಗಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೂ ಮಿಡತೆಗಳ ಹಾವಳಿ ರೈತರನ್ನು ಕಾಡಿರಲಿಲ್ಲ. ಆದರೆ ಇದೇ ಮೊದಲ ಬಾರಿ ಜಿಲ್ಲೆಯ ಶೃಂಗೇರಿ ತಾಲೂಕಿನ ತೆಕ್ಕೂರು ಗ್ರಾಮದಲ್ಲಿರುವ ಅಡಿಕೆ ತೋಟಗಳಲ್ಲಿ ಹಿಂಡು ಹಿಂಡಾಗಿ ಮಿಡತೆಗಳು ಕಂಡು ಬಂದಿವೆ. ಅಡಿಕೆ ಮರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಮಿಡತೆಗಳು ಅಡಿಕೆ ಮರದ ಸುಳಿಯನ್ನೂ ಸೇರಿದಂತೆ ಮರದ ಎಲೆಗಳನ್ನು ತಿಂದು ಹಾಕುತ್ತಿವೆ ಎಂದು ತಿಳಿದು ಬಂದಿದ್ದು, ಮಿಡತೆಗಳ ಕಾಟದಿಂದ ಅಡಿಕೆ ಮರಗಳನ್ನು ರಕ್ಷಣೆ ಮಾಡುವ ದಾರಿ ಕಾಣದೇ ಬೆಳೆಗಾರರು ಕೃಷಿ ಇಲಾಖೆಯ ಅಧಿಕಾರಿಗಳ ಸಲಹೆ ಸೂಚನೆಗೆ ಮೊರೆ ಹೋಗುತ್ತಿದ್ದಾರೆ.
ಕಳೆದ ಎರಡು ದಿನಗಳಲ್ಲಿ ತೆಕ್ಕೂರು ಗ್ರಾಮದಲ್ಲಿರುವ ಅನೇಕ ಅಡಿಕೆ ತೋಟಗಳಲ್ಲಿ ದೊಡ್ಡ ಗಾತ್ರದ ಮಿಡತೆಗಳು ಕಂಡು ಬರುತ್ತಿವೆ ಎಂದು ಬೆಳೆಗಾರರು ಹೇಳಿಕೆ ನೀಡಿದ್ದು, ಕೃಷಿ, ತೋಟಗಾರಿಕಾ ಇಲಾಖಾಧಿಕಾರಿಗಳು ಮಿಡತೆಗಳ ಹಾವಳಿಯಿಂದ ಅಡಿಕೆ ತೋಟಗಳ ಸಂರಕ್ಷಣೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ರೈತರು ಮನವಿ ಮಾಡಿದ್ದಾರೆ.