ಶಿಕ್ಷಕರ ವರ್ಗಾವಣೆ ಸಂಬಂಧ ಹೊಸ ಮಾರ್ಗಸೂಚಿ ಪ್ರಕಟ: ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ

Update: 2020-06-10 16:45 GMT

ಬೆಂಗಳೂರು, ಜೂ.10: ರಾಜ್ಯ ಸರಕಾರ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಸಂಬಂಧ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ವರ್ಗಾವಣೆಯನ್ನು ಎಪ್ರಿಲ್‍ನಲ್ಲಿ ಆರಂಭಿಸಿ ಮೇ ಅಂತ್ಯದೊಳಗೆ ಮುಗಿಸುವಂತೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.

ಶಿಕ್ಷಕರ ಹೊಸ ವರ್ಗಾವಣಾ ಕಾಯ್ದೆಗೆ ಕರಡು ನಿಯಮ ರೂಪಿಸಿ ಬುಧವಾರ ಪ್ರಕಟಿಸಿದ್ದು, 15 ದಿನದೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಹೊಸ ಕಾಯ್ದೆಯ ಪ್ರಕಾರ ಪ್ರತಿವರ್ಷ ಆನ್‍ಲೈನ್‍ನಲ್ಲಿಯೇ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಸಾರ್ವಜನಿಕ ಶಿಕ್ಷಣ ಆಯುಕ್ತರು ವಲಯವಾರು ಅಧಿಕಾರಿಗಳನ್ನು ನಿಯೋಜಿಸಲಿದ್ದಾರೆ. ಮಂಜೂರಾದ ಹುದ್ದೆ ಹಾಗೂ ಖಾಲಿ ಹುದ್ದೆಗಳನ್ನು ಆಧರಿಸಿ ವರ್ಗಾವಣೆಗೆ ಲಭ್ಯವಿರುವ ಪಟ್ಟಿಯನ್ನು ಜನವರಿ ಎರಡನೇ ವಾರದಲ್ಲಿ ಪ್ರಕಟಿಸಲಿದ್ದಾರೆ.

ವರ್ಗಾವಣೆ ಸಮಯದಲ್ಲಿ 50 ವರ್ಷದ ಮಹಿಳೆಯರು, 55 ವರ್ಷ ಮೇಲ್ಪಟ್ಟ ಪುರುಷರ ವರ್ಗಾವಣೆಯನ್ನು ಪರಿಗಣಿಸುವುದಿಲ್ಲ. ಈ ವಯೋಮಾನದವರು ಕೋರಿಕೆ ಸಲ್ಲಿಸಿದಲ್ಲಿ ಪರಿಗಣಿಸಲಾಗುತ್ತದೆ. ವರ್ಗಾವಣೆಗೆ ಮನವಿ ಸಲ್ಲಿಸುವ ಪ್ರಕರಣದಲ್ಲಿ ಶೇ.7ರಷ್ಟು ವರ್ಗಾವಣೆ ಮಾಡಲಾಗುತ್ತದೆ. ವಲಯವಾರು ಶೇ.4ರಷ್ಟು ವರ್ಗಾವಣೆ ಮಾಡಲಾಗುತ್ತದೆ. ವಲಯದೊಳಗೆ ಮನವಿ ಸಲ್ಲಿಸುವ ಶೇ.2ರಷ್ಟು ವರ್ಗಾವಣೆ, ಅಂತರ ವಲಯ ವರ್ಗಾವಣೆಗೆ ಮನವಿ ಸಲ್ಲಿಸುವ ಶೇ.2ರಷ್ಟು ಪ್ರಕರಣಗಳನ್ನು ಪರಿಗಣಿಸಲಾಗುತ್ತದೆ ಎಂದು ಕರಡಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News