ನೇಕಾರ ಸಮ್ಮಾನ್ ಯೋಜನೆ ಜಾರಿ: ಕೈಮಗ್ಗ ನೇಕಾರರಿಂದ ಅರ್ಜಿ ಆಹ್ವಾನ

Update: 2020-06-10 18:01 GMT

ಬೆಂಗಳೂರು, ಜೂ.10: ಕೋವಿಡ್-19 ಸಾಂಕ್ರಾಮಿಕ ರೋಗದ ಸಮಸ್ಯೆಯಿಂದಾಗಿ ಲಾಕ್‍ಡೌನ್ ಘೋಷಣೆಯಾಗಿರುವುದರಿಂದ ಕೈಮಗ್ಗ ನೇಕಾರರು ಸಂಕಷ್ಟದಲ್ಲಿರುವುದನ್ನು ಮನಗಂಡು ಸರಕಾರವು 2020-21ನೇ ಸಾಲಿನಿಂದ ಕೈಮಗ್ಗ ನೇಕಾರಿಕೆ ಹಾಗೂ ಇತರೆ ಕೈಮಗ್ಗ ಚಟುಚಟಿಕೆಗಳನ್ನು ನಡೆಸುವ ನೇಕಾರರಿಗೆ ಪ್ರತಿವರ್ಷ ತಲಾ 2 ಸಾವಿರ ರೂ.ಗಳ ನೆರವನ್ನು ನೀಡಲು ನೇಕಾರ ಸಮ್ಮಾನ್ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ನೆರವನ್ನು ಪಡೆದುಕೊಳ್ಳಲು ಅರ್ಹ ಕೈಮಗ್ಗ ನೇಕಾರರಿಂದ ಅರ್ಜಿ ಆಹ್ವಾನಿಸಲಾಗಿದೆ.

2017-18ನೆ ಸಾಲಿನಲ್ಲಿ 4ನೇ ರಾಷ್ಟ್ರೀಯ ಕೈಮಗ್ಗ ಗಣತಿಯ ಪ್ರಕಾರ ನೊಂದಾಯಿಸಲಾದ ಕೈಮಗ್ಗ ನೇಕಾರರಿಗೆ ಪೆಹಚಾನ್ ಕಾರ್ಡ್ ನಂಬರ್ ನೀಡಲಾಗಿದ್ದು, ಈ ಕಾರ್ಡ್ ಹೊಂದಿರುವ ಅಥವಾ ಗಣತಿಯ ಪಟ್ಟಿಯಲ್ಲಿ ನೊಂದಾಯಿಸಲಾಗಿರುವ ಕೈಮಗ್ಗ ನೇಕಾರರಿಗೆ ತಲಾ ರೂ.2ಸಾವಿರ ರೂನಂತೆ ನೇರವಾಗಿ ಬ್ಯಾಂಕಿನ ಖಾತೆಗೆ ವರ್ಗಾವಣೆ ಮಾಡಲು ರಾಜ್ಯ ಸರಕಾರದ ಸೇವಾ ಸಿಂಧು ಆನ್‍ಲೈನ್ ಪೋರ್ಟಲ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.

ಪ್ರಸ್ತುತ ಕೈಮಗ್ಗ ನೇಯ್ಗೆಯಲ್ಲಿ ತೊಡಗಿರುವ ನೇಕಾರರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು, ಅರ್ಜಿಗಳನ್ನು ಉಪನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಬೆಂಗಳೂರು ನಗರ ಜಿಲ್ಲಾ ಪಂಚಾಯತ್, ಸರಕಾರಿ ಎಸ್.ಜೆ.ಪಿ.ಪಾಲಿಟೆಕ್ನಿಕ್ ಆವರಣ, ಕೆ.ಆರ್.ಸರ್ಕಲ್, ಬೆಂಗಳೂರು-560001 ರವರಿಂದ ಅರ್ಜಿ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಜೂನ್ 17ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08022341176 ಯನ್ನು ಸಂಪರ್ಕಿಸಬಹುದಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News