7ನೇ ತರಗತಿವರೆಗೆ ಆನ್‌ಲೈನ್‌ ಶಿಕ್ಷಣ ರದ್ದು ಮಾಡುವ ಬಗ್ಗೆ ಸರ್ಕಾರ ನಿರ್ಧಾರ ಪ್ರಕಟಿಸಿಲ್ಲ: ಸುರೇಶ್ ಕುಮಾರ್

Update: 2020-06-11 12:15 GMT

ಬೆಂಗಳೂರು, ಜೂ. 11: ಎಲ್‍ಕೆಜಿ, ಯುಕೆಜಿ ಸೇರಿದಂತೆ ಏಳನೆ ತರಗತಿಯ ವರೆಗೆ ಆನ್‍ಲೈನ್ ಕ್ಲಾಸ್ ನಡೆಸದಿರಲು ರಾಜ್ಯ ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ ಎಂಬ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದು, 6 ಮತ್ತು 7ನೇ ತರಗತಿಗೆ ಆನ್‌ಲೈನ್‌ ಶಿಕ್ಷಣ ರದ್ದು ಮಾಡುವ ಬಗ್ಗೆ ಸರ್ಕಾರ ನಿರ್ಧಾರ ಪ್ರಕಟಿಸಿಲ್ಲ ಎಂದು ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಸುರೇಶ್‌ ಕುಮಾರ್ ಅವರು‌, ಕರ್ನಾಟಕ ಸರ್ಕಾರ ಎಲ್‌ಕೆಜಿ, ಯುಕೆಜಿ, 1 ರಿಂದ 5ನೇ ತರಗತಿಯವರೆಗಿನ ಆನ್‌ಲೈನ್‌ ಶಿಕ್ಷಣವನ್ನು ರದ್ದು ಮಾಡಿದೆ. ಆರು ಮತ್ತು ಏಳನೇ ತರಗತಿಯವರೆಗಿನ ಆನ್‌ಲೈನ್‌ ಶಿಕ್ಷಣವನ್ನು ರದ್ದು ಮಾಡಬೇಕು ಎಂದು ಕೆಲ ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಸರ್ಕಾರ ರದ್ದು ಪಡಿಸುವ ಯಾವುದೇ ನಿರ್ಧಾರ ಪ್ರಕಟಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮಾಧುಸ್ವಾಮಿ ಹೇಳಿದ್ದೇನು ?

ಎಲ್‍ಕೆಜಿ, ಯುಕೆಜಿ ಸೇರಿದಂತೆ ಏಳನೆ ತರಗತಿಯ ವರೆಗೆ ಆನ್‍ಲೈನ್ ಕ್ಲಾಸ್ ನಡೆಸದಿರಲು ರಾಜ್ಯ ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದರು.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಒಂದರಿಂದ 7ನೆ ತರಗತಿಯ ವರೆಗೆ ಆನ್‍ಲೈನ್ ಕ್ಲಾಸ್ ನಡೆಯುವುದಿಲ್ಲ. ಈ ಬಗ್ಗೆ ಶೀಘ್ರವೇ ಶಿಕ್ಷಣ ಇಲಾಖೆ ಆದೇಶ ಹೊರಡಿಸಲಿದೆ ಎಂದಿದ್ದಾರೆ.

ಎಲ್‍ಕೆಜಿಯಿಂದ ಐದನೆ ತರಗತಿಯ ವರೆಗೆ ಆನ್‍ಲೈನ್ ಕ್ಲಾಸ್ ನಡೆಸಬಾರದು ಎಂದು ನಿರ್ಧರಿಸಲಾಗಿತ್ತು. ಇದೀಗ ಅದನ್ನು ಏಳನೆ ತರಗತಿಯ ವರೆಗೂ ವಿಸ್ತರಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಚಿವ ಸಂಪುಟ ಸಭೆ ಮೇಲ್ಕಂಡ ನಿರ್ಧಾರ ಮಾಡಿದೆ ಎಂದು ಮಾಧುಸ್ವಾಮಿ ವಿವರ ನೀಡಿದ್ದರು. ಆದರೆ ಸುರೇಶ್ ಕುಮಾರ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿ, ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ನಿಗದಿಯಂತೆ ಎಸೆಸೆಲ್ಸಿ ಪರೀಕ್ಷೆ: ಈಗಾಗಲೇ ರಾಜ್ಯ ಸರಕಾರ ನಿಗದಿಪಡಿಸಿರುವ ದಿನಾಂಕದಂದು ಎಸೆಸೆಲ್ಸಿ ಪರೀಕ್ಷೆ ನಡೆಯಲಿದೆ. ಯಾವುದೇ ಕಾರಣಕ್ಕೂ ದಿನಾಂಕ ಬದಲಿಸುವುದಿಲ್ಲ. ನೆರೆ ರಾಜ್ಯಗಳ ಮಾದರಿಯಲ್ಲಿ ಕರ್ನಾಟಕದಲ್ಲಿ ಎಸೆಸೆಲ್ಸಿ ಪರೀಕ್ಷೆಯನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡಿಲ್ಲ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News