×
Ad

ಗ್ರಾಮ ಪಂಚಾಯತ್ ಗಳಿಗೆ ಶೀಘ್ರ ಚುನಾವಣೆ ನಡೆಸಲು ಸಚಿವ ಸಂಪುಟ ನಿರ್ಧಾರ

Update: 2020-06-11 18:23 IST

ಬೆಂಗಳೂರು, ಜೂ. 11: ವಿರೋಧ ಪಕ್ಷಗಳ ತೀವ್ರ ವಿರೋಧಕ್ಕೆ ಮಣಿದ ರಾಜ್ಯ ಸರಕಾರ, ಗ್ರಾಮ ಪಂಚಾಯತ್ ಗಳಿಗೆ ಶೀಘ್ರ ಚುನಾವಣೆ ನಡೆಸಲು ತೀರ್ಮಾನಿಸಿದ್ದು, ಹೊಸ ಆಡಳಿತ ವ್ಯವಸ್ಥೆ ಅಸ್ತಿತ್ವಕ್ಕೆ ಬರುವವರೆಗೆ ಆಡಳಿತಾಧಿಕಾರಿ ನೇಮಿಸಲು ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ ಕೈಗೊಂಡಿದೆ.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಗ್ರಾಮ ಪಂಚಾಯತ್ ಗಳಿಗೆ ಶೀಘ್ರ ಚುನಾವಣೆ ನಡೆಸಲು ತೀರ್ಮಾನಿಸಿದ್ದು, ಹೊಸ ಆಡಳಿತ ವ್ಯವಸ್ಥೆ ಅಸ್ತಿತ್ವಕ್ಕೆ ಬರುವವರೆಗೆ ಆಡಳಿತಾಧಿಕಾರಿ ನೇಮಿಸಲಾಗುವುದು. ಆಡಳಿತಾಧಿಕಾರಿ ನೇಮಕ ಸಂಬಂಧ ಜಿಲ್ಲಾಧಿಕಾರಿ ಮಟ್ಟದಲ್ಲಿ ತೀರ್ಮಾನ ಮಾಡಲು ನಿರ್ಧರಿಸಿದ್ದು, ಶೀಘ್ರವೇ ಆದೇಶ ಹೊರಡಿಸಲಾಗುವುದು ಎಂದರು.

ನಿಯಮಾವಳಿ ಬದಲು: ಕರ್ನಾಟಕ ಉಪ ಖನಿಜ ನಿಯಮಾವಳಿ ಬದಲಿಸಲಾಗಿದೆ. ತೂಕದ ಮೇಲೆ ರಿಯಾಯಿತಿ, ಬಿಲ್ ಕಟಾವಿನಲ್ಲಿ ರಾಯಲ್ಟಿ ಕಡಿಮೆ, ಸಣ್ಣ ಪ್ರಮಾಣದ ತೆರಿಗೆ, ಗ್ರಾನೈಟ್ ಉದ್ಯಮಕ್ಕೆ ರಾಯಲ್ಟಿ ತೆರಿಗೆ ಕಡಿಮೆ ಮಾಡಲಾಗಿದೆ ಎಂದು ಮಾಧುಸ್ವಾಮಿ ಅವರು ಇದೇ ಸಂದರ್ಭದಲ್ಲಿ ವಿವರ ನೀಡಿದರು.

ಮುಂದಿನ ಸಭೆಯಲ್ಲಿ ನಿರ್ಧಾರ: ಇಂದಿರಾ ಕ್ಯಾಂಟೀನ್ ವಿಚಾರ ಬಗ್ಗೆ ಸಂಪುಟದಲ್ಲಿ ಚರ್ಚೆ ನಡೆಸಿದ್ದು, ದರ ಏರಿಕೆ ಮಾಡದೆ ಕ್ಯಾಂಟೀನ್ ನಡೆಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಬೆಲೆ ಹೆಚ್ಚಳ ಅನಿವಾರ್ಯ ಎಂಬ ಪ್ರಸ್ತಾಪ ಮಂಡಿಸಲಾಯಿತು. ಆದರೆ, ಈ ವಿಷಯಗಳು ಹೆಚ್ಚಿದ್ದ ಕಾರಣ ಈ ವಿಚಾರವನ್ನು ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದೆ ಎಂದು ಅವರು ಸ್ಪಷ್ಟನೆ ನೀಡಿದರು.

ಬೆಂಗಳೂರು ಸಿಟಿ ವಿವಿ: ಬೆಂಗಳೂರಿನ ಮಹಾರಾಣಿ ಮತ್ತು ಮಂಡ್ಯ ಕ್ಲಸ್ಟರ್ ವಿಶ್ವ ವಿದ್ಯಾಲಯಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗುವುದು. ಬೆಂಗಳೂರು ಕೇಂದ್ರ ವಿಶ್ವ ವಿದ್ಯಾಲಯವನ್ನು ಸೆಂಟ್ರಲ್ ವಿವಿ ಹೆಸರು ಬದಲಿಸಿದ್ದು, ಇನ್ನು ಮುಂದೆ ಅದನ್ನು `ಬೆಂಗಳೂರು ಸಿಟಿ ವಿವಿ' ಎಂದು ಮರು ನಾಮಕರಣ ಮಾಡಲು ಸಂಪುಟ ತೀರ್ಮಾನಿಸಿದೆ. ಬೆಂಗಳೂರು ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಸರಕಾರಿ ವಿಜ್ಞಾನ ಕಾಲೇಜಿಗೆ ವಿಶ್ವ ವಿದ್ಯಾಲಯ ಸ್ವರೂಪ ನೀಡಿ ಪ್ರತ್ಯೇಕ `ನೃಪತುಂಗ ವಿಶ್ವ ವಿದ್ಯಾಲಯ' ಎಂದು ಹೆಸರಿಸಿ ಬದಲಿಸಿ ಆದೇಶ ಹೊರಡಿಸಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ತಾಲೂಕು ಆಸ್ಪತ್ರೆಗಳು ಮೇಲ್ದರ್ಜೆಗೆ: ರಾಜ್ಯದ ಎಂಟು ಜಿಲ್ಲೆಗಳ 47 ತಾಲೂಕುಗಳ ಒಟ್ಟು 1,694 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 1,307 ಆರೋಗ್ಯ ಉಪ ಕೇಂದ್ರಗಳನ್ನು 'ಆರೋಗ್ಯ ಕ್ಷೇಮ ಕೇಂದ್ರ'ಗಳನ್ನಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟದ ಒಪ್ಪಿಗೆ ನೀಡಿದೆ ಎಂದು ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದರು.

ಮೇಲ್ಕಂಡ ಎಂಟು ಜಿಲ್ಲೆಗಳ ಒಟ್ಟು 47 ತಾಲೂಕುಗಳ ಆಸ್ಪತ್ರೆಗಳ ಮೇಲ್ದರ್ಜೆಗೆ ಕೇಂದ್ರ ಸರಕಾರ ಮೂರು ವರ್ಷಗಳಲ್ಲಿ ಆರ್‍ಒಪಿ ಅಡಿಯಲ್ಲಿ ಅನುದಾನ ನೀಡಲಿದೆ. ಇದೀಗ ರಾಜ್ಯ ಸರಕಾರ 11.62 ಕೋಟಿ ರೂ.ಗಳ ಪ್ರಸ್ತಾವಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ. ಇದರಿಂದ ವಿವಿಧ ಆರೋಗ್ಯ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದರು.

ಪ್ರಕರಣಗಳ ವಾಪಸ್: ಗಣೇಶ ವಿಸರ್ಜನೆ, ರೈತ ಹೋರಾಟಗಾರರು ಸೇರಿದಂತೆ ವಿವಿಧ ಪ್ರಕರಣಗಳ ಅಡಿ ದಾಖಲಾದ ಒಟ್ಟು 53 ಪ್ರಕರಣ ಹಿಂಪಡೆಯಲು ಸಂಪುಟ ಸಭೆ ತೀರ್ಮಾನಿಸಿದೆ. ಜನರು ಸೇರಿ ಚಳವಳಿ ನಡೆಸಿದ ಪ್ರಕರಣಗಳನ್ನಷ್ಟೇ ಹಿಂಪಡೆಯಲಾಗಿದ್ದು, ಯಾವುದೇ ವೈಯಕ್ತಿಕ ಅಥವಾ ಗುಂಪು ಪ್ರಕರಣಗಳಲ್ಲಿ ವಾಪಸ್ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಹೊಸ ಕಾಲೇಜುಗಳು ಸದ್ಯಕ್ಕೆ ಇಲ್ಲ: ರಾಜ್ಯದಲ್ಲಿ ಚಾಲ್ತಿಯಲ್ಲಿರುವ ತೋಟಗಾರಿಕೆ ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುವವರೆಗೂ ಹೊಸ ಕಾಲೇಜುಗಳ ಆರಂಭಕ್ಕೆ ಅನುಮೋದನೆ ಇಲ್ಲ. ಹಾಸನ ಹಾಗೂ ಸಿಂಧಗಿಯಲ್ಲಿ ಹಿಂದಿನ ಸರಕಾರ ಸ್ಥಾಪಿಸಲು ಉದ್ದೇಶಿಸಿದ್ದ ಎರಡು ತೋಟಗಾರಿಕಾ ಕಾಲೇಜುಗಳನ್ನು ಸದ್ಯಕ್ಕೆ ಆರಂಭಿಸದಿರಲು ತೀರ್ಮಾನ ಮಾಡಲಾಗಿದೆ ಎಂದರು.

20 ಕೋಟಿ ರೂ.ಅನುದಾನ: ಬೆಂಗಳೂರಿನಲ್ಲಿ ವಿಜ್ಞಾನ ಗ್ಯಾಲರಿ ನಿರ್ಮಿಸಲು 2013-14ರಲ್ಲಿ ಅನುಮೋದನೆ ನೀಡಲಾಗಿತ್ತು. ಆ ವೇಳೆ ಅಂದಾಜು ಮಾಡಿದ್ದ ಮೊತ್ತ ಇದೀಗ 86.75 ಕೋಟಿ ರೂ.ಗಳಿಗೆ ಏರಿಕೆಯಾಗಿದ್ದು, ಇದೀಗ 20 ಕೋಟಿ ರೂ.ಅನುದಾನ ಒದಗಿಸಲು ಸಂಪುಟ ನಿರ್ಧರಿಸಿದೆ ಎಂದು ತಿಳಿಸಿದರು.

ಬೆಂಗಳೂರಿನ ಕೆಂಗೇರಿ ಸಮೀಪ ಲೋಕ ಶಿಕ್ಷಣ ಟ್ರಸ್ಟ್ ಗೆ ನೀಡಿದ್ದ ಭೂಮಿಯನ್ನು ಸಾರ್ವಜನಿಕ ಶಿಕ್ಷಣ ಅಭಿವೃದ್ಧಿ ಮತ್ತು ಕನ್ನಡ ಭಾಷೆ ಉನ್ನತ್ತಿಗಾಗಿ ಅವರಿಗೇ ನೀಡಲು ಸಂಪುಟ ಅನುಮೋದನೆ ನೀಡಿದೆ. ಚಿಕ್ಕಬೇಗೂರು ಮತ್ತು ಹುಳಿಮಾವು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಿಂದ ಕೊಲಾರಕ್ಕೆ ಕೆ.ಸಿ.ವ್ಯಾಲಿ ಹೆಚ್ಚುವರಿ ನೀರು ಒದಗಿಸುವ ಯೋಜನೆಗೆ ಒಟ್ಟು 40 ಕೋಟಿ ರೂ.ಮೊತ್ತಕ್ಕೆ ಅನುಮೋದನೆ ನೀಡಿದೆ.

ಉಡುಪಿ ಜಿಲ್ಲೆಯ ಬೈಂದೂರು, ಹುಡಿತೆರೆ ವ್ಯಾಪ್ತಿಯ ಕೆಲ ಗ್ರಾಮ ಪಂಚಾಯತ್ ಸೇರಿಸಿ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಲು ಸಂಪುಟ ತೀರ್ಮಾನಿಸಿದೆ. ನಗರ ಗ್ರಾಮಾಂತರ ಯೋಜನಾ ಕಾಯ್ದೆ ತಿದ್ದುಪಡಿಯಾಗಿದ್ದು, ಯೋಜನೆ ರೂಪಿಸುವ ವೇಳೆ ಸ್ಥಳೀಯವಾಗಿ ಪರಿಹರಿಸಿಕೊಳ್ಳಬಹುದು ಎಂದು ಹೇಳಿದರು.

ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಸಹಕಾರ ಸಂಘಗಳಿಗೆ ಚುನಾವಣೆ ನಡೆಸಲು ಒಪ್ಪಿಗೆ ನೀಡಿದ್ದು, ಸಕ್ಕರೆ ಕಾರ್ಖಾನೆಗಳನ್ನು ಹೊರತುಪಡಿಸಿ, ಉಳಿದ ಸಹಕಾರ ಸಂಘಗಳಿಗೆ ಚುನಾವಣೆ ನಡೆಸಲು ಸಂಪುಟ ಸಮ್ಮತಿಸಿದೆ ಎಂದ ಅವರು, ಚಿಕ್ಕಮಗಳೂರಿನ ತೇಗೂರು ಬಳಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದರು.

ಕೆಪಿಎಸ್ಸಿ 1998ರ ಬ್ಯಾಚ್ ಪ್ರೊಬೇಷನರಿ ಪಟ್ಟಿಯಲ್ಲಿ ಗೊಂದಲವಾಗಿತ್ತು. ಇದೀಗ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅವರು ನೀಡಿದ್ದ ಹುದ್ದೆಗಳನ್ನು ಮೇಲ್ದರ್ಜೆಗೆರಿಸಿದ್ದು, ಅವರ ವೇತನ ಹೆಚ್ಚಾಗಿರಲಿಲ್ಲ. ಇದೀಗ ಅದನ್ನು ಬದಲಿಸಿ ಸಂಬಳ ಹೆಚ್ಚಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಗ್ರಾಹಕರಿಗೆ ಅನುಕೂಲ: ಗ್ರಾಹಕರ ಹಿತದೃಷ್ಟಿಯಿಂದ ಅವರಿಗೆ ಅನುಕೂಲವಾಗಲೆಂದು ರಿಯಲ್ ಎಸ್ಟೇಟ್ ನಿಯಂತ್ರಣ ಕಾಯ್ದೆ(ರೇರಾ)ಗೆ ತಿದ್ದುಪಡಿ ತರಲಾಗಿದೆ. ಸೇಲ್ ಅಗ್ರಿಮೆಂಟ್ ಮಾಡಿಕೊಳ್ಳಲು ಅವಕಾಶ ಒದಗಿಸಿದ್ದು, ಇದರಿಂದ ವಸತಿ ಸಮುಚ್ಛಯಗಳಲ್ಲಿ ಪ್ಲಾಟ್‍ಗಳನ್ನು ಕೊಳ್ಳುವ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದರು.

ಸಿಎಆರ್, ಡಿಎಆರ್, ಕೆಎರ್ಸಾಪಿ ಸೇರಿ ವಿವಿಧ ಪೊಲೀಸ್ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾನ್ ಸ್ಬೆಬಲ್‍ಗಳು ಉನ್ನತ ಹುದ್ದೆಯ ಪರೀಕ್ಷೆಗೆ ಮುಂದಾದರೆ 10 ಅಂಕ ಗ್ರೇಸ್ ನೀಡಲು ಸಂಪುಟ ತೀರ್ಮಾನ ಮಾಡಿದೆ. ಬೆಂಗಳೂರು ನಗರ ಆನೇಕಲ್ ಜಿಗಣಿ ಹೋಬಳಿಯಲ್ಲಿ ಪುರಸ್ಕೃತ ಯೋಜನೆಗೆ ಅನುಮತಿ ನೀಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News