×
Ad

ಮಂಡ್ಯ: ತಂದೆ-ತಾಯಿಯನ್ನು ಕೊಲೆಗೈದು ನದಿಗೆ ಹಾರಿದ ಯುವಕ

Update: 2020-06-11 21:30 IST

ಮಂಡ್ಯ, ಜೂ.11: ತನ್ನ ತಂದೆ-ತಾಯಿಯನ್ನು ಕೊಲೆಗೈದು ತಾನೂ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಸ್ಥಳೀಯರು ರಕ್ಷಿಸಿರುವ ಘಟನೆ ಶ್ರೀರಂಗಪಟ್ಟಣದಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ಬೆಂಗಳೂರಿನ ಕಾಮಾಕ್ಷಿಪಾಳ್ಯದ(ರಂಗನಾಥನಗರ) ಎಂ.ಸಂತೋಷ್ ಎಂಬುವವ ಶ್ರೀರಂಗಪಟ್ಟಣದ ಬಸ್‍ ನಿಲ್ದಾಣದ ಬಳಿ ಸೇತುವೆ ಮೇಲಿಂದ ಕಾವೇರಿ ನದಿಗೆ ಹಾರಿ ಎಡಗಾಲು ಮುರಿದಿದ್ದು, ಸ್ಥಳೀಯರು ರಕ್ಷಿಸಿದ್ದಾರೆ.

ವೃತ್ತಿಯಲ್ಲಿ ಲೆಕ್ಕಪರಿಶೋಧಕನಾಗಿದ್ದ ಸಂತೋಷ್ ಬುಧವಾರ ಬೆಳಗಿನ ಜಾವ ತನ್ನ ತಂದೆ ನರಸಿಂಹರಾಜು(61) ಹಾಗೂ ತಾಯಿ ಸರಸ್ವತಿ(58) ಅವರನ್ನು ಕೊಲೆಗೈದು ಅಲ್ಲಿಂದ ಶ್ರೀರಂಗಪಟ್ಟಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ತೆರಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಾರ್ಟ್‍ಮೆಂಟ್ ಸಂಬಂಧ ಉಂಟಾದ ಕಲಹದ ಹಿನ್ನೆಲೆಯಲ್ಲಿ ಸಂತೋಷ್ ತಂದೆ-ತಾಯಿಯನ್ನು ಕೊಲೆಗೈದಿದ್ದಾನೆ ಎನ್ನಲಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.  

ಈ ಸಂಬಂಧ ಶ್ರೀರಂಗಪಟ್ಟಣ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News