ತುಮಕೂರು: ಒಂದೇ ಕುಟುಂಬದ ಆರು ಮಂದಿಗೆ ಕೊರೋನ ಸೋಂಕು ದೃಢ
ತುಮಕೂರು, ಜೂ.11: ಸಿರಾ ನಗರದ ಮೊಹಲ್ಲಾ ಪಾರ್ಕ್ ಬಳಿ ಒಂದೇ ಕುಂಟುಂಬದ ಆರು ಮಂದಿ ಹಾಗೂ ಮಧುಗಿರಿ ತಾಲೂಕಿನಲ್ಲಿ ಒಂದು ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಒಂದೇ ದಿನ 7 ಕೊರೋನ ವೈರಸ್ ಪ್ರಕರಣ ಪತ್ತೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ಆಂಧ್ರಪ್ರದೇಶದ ಹಿಂದೂಪುರಕ್ಕೆ ತೆರಳಿದ್ದ ಸಿರಾ ಮೂಲದ ವ್ಯಕ್ತಿಗೆ ಸೋಂಕು ತಗುಲಿರುವುದು ಎರಡು ದಿನಗಳ ಹಿಂದೆ ಪತ್ತೆಯಾಗಿತ್ತು. ಈಗ ಅವರ ಕುಟುಂಬಸ್ಥರಿಗೂ ಸೋಂಕು ತಗಲಿದೆ. ತಾಯಿ, ಹೆಂಡತಿ ಹಾಗೂ ಮಕ್ಕಳಿಗೆ ಸೋಂಕು ದೃಢಪಟ್ಟಿದೆ. ಲಾಕ್ ಡೌನ್ ಸಂದರ್ಭದಲ್ಲಿ ಹಿಂದೂಪುರಕ್ಕೆ ತೆರಳಿದ್ದ ಅವರು ಎರಡು ದಿನ ತಂಗಿದ್ದು ನಂತರ ಹೆಂಡತಿ ಮಕ್ಕಳೊಂದಿಗೆ ಸಿರಾಕ್ಕೆ ವಾಪಾಸ್ಸಾಗಿದ್ದರು.
ಮಧುಗಿರಿ ತಾಲೂಕಿನ 40 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ಜ್ವರದ ಕಾರಣದಿಂದಾಗಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದ ಇವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ತೆರಳುವಂತೆ ವೈದ್ಯರು ಸೂಚಿಸಿದ್ದರು, ಇವರ ಟ್ರಾವಲ್ ಹಿಸ್ಟರಿ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಡಿಎಚ್ ಒ ನಾಗೇಂದ್ರ ತಿಳಿಸಿದ್ದಾರೆ.
ಹೊಸದಾಗಿ ಪತ್ತೆಯಾದ 7 ಪ್ರಕರಣ ಸೇರಿ ಜಿಲ್ಲೆಯಲ್ಲಿ ಒಟ್ಟು 41 ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ 28 ಮಂದಿಗೆ ಚಿಕಿತ್ಸೆಯನ್ನು ಪಡೆದು ಗುಣಮುಖರಾಗಿದ್ದು, 11 ಪ್ರಕರಣಗಳಲ್ಲಿ ಸೋಂಕಿತರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.