ಎಸೆಸೆಲ್ಸಿ ಪರೀಕ್ಷೆ ರದ್ದುಗೊಳಿಸುವಂತೆ ಕೋರಿ ಸಿಎಂಗೆ ತನ್ವೀರ್ ಸೇಠ್ ಪತ್ರ

Update: 2020-06-11 16:54 GMT

ಬೆಂಗಳೂರು, ಜೂ.11: ಕೋವಿಡ್-19ರ ಸಂದಿಗ್ಧ ಪರಿಸ್ಥಿತಿಯಲ್ಲಿ ಸರಕಾರವು ತಮ್ಮ ಸ್ಪಷ್ಟ ನಿಲುವು ಪ್ರಕಟಿಸಿ, ಲಕ್ಷಾಂತರ ವಿದ್ಯಾರ್ಥಿ ಮತ್ತು ಪೋಷಕರ ಆತಂಕ ಮತ್ತು ಭಯವನ್ನು ದೂರಗೊಳಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದು ಮಾಜಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಮನವಿ ಮಾಡಿದ್ದಾರೆ.

ಈಗಾಗಲೆ ಸಮೀಪದ ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳು ಈ ರಾಜ್ಯದ 10ನೆ ತರಗತಿಯ ಪರೀಕ್ಷೆಗಳನ್ನು ರದ್ದುಪಡಿಸಿ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡುವ ಮಹತ್ವದ ನಿರ್ಣಯವನ್ನು ಕೈಗೊಂಡಿದ್ದು, ರಾಜ್ಯ ಸರಕಾರವು ಈ ನಿಟ್ಟಿನಲ್ಲಿ ದಿಟ್ಟ ನಿಲುವು ಮತ್ತು ನಿರ್ಧಾರವನ್ನು ಶೀಘ್ರವಾಗಿ ಪ್ರಕಟಿಸುವ ಅನಿವಾರ್ಯತೆ ಇರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಯ ಕುಟುಂಬಸ್ಥರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಪರೀಕ್ಷಾ ಕಾರ್ಯದಲ್ಲಿ ತೊಡಗಿರುವ ಸರಕಾರದ ಆಡಳಿತ ವ್ಯವಸ್ಥೆಯಲ್ಲಿರುವ ಒಟ್ಟು ಸುಮಾರು 30 ಲಕ್ಷ ಜನ ಪರೀಕ್ಷೆಗೆ ಸಂಬಂಧಿಸಿದ ಅನಿಶ್ಚಿತತೆಯಿಂದ ಪ್ರತಿದಿನ ಆತಂಕದಲ್ಲಿದ್ದು, ಇಂತಹ ವಾತಾವರಣದಲ್ಲಿ ವಿದ್ಯಾರ್ಥಿಗಳು ಆತಂಕ ರಹಿತವಾಗಿ ಪರೀಕ್ಷೆಗಳನ್ನು ಬರೆಯಲು ಸಾಧ್ಯ ಇಲ್ಲದೆ ಇರುವುದರಿಂದ, ಈ ಬಾರಿಯ ಪರೀಕ್ಷೆ ರದ್ದುಪಡಿಸುವುದು ಸೂಕ್ತ ಎಂದು ಅವರು ಒತ್ತಾಯಿಸಿದ್ದಾರೆ.

ಕೋವಿಡ್-19ರ ಇಂದಿನ ಭಯಾನಕ ಪರಿಸ್ಥಿತಿಯಲ್ಲಿ ಜೂನ್ 25ರಿಂದ ಎಸೆಸೆಲ್ಸಿ ಪರೀಕ್ಷೆಗಳನ್ನು ನಡೆಸುವುದು ಸೂಕ್ತವಲ್ಲ ಎಂದು ಅನೇಕ ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಎಷ್ಟೆ ಮುನ್ನೆಚ್ಚರಿಕೆ ವಹಿಸಿದರೂ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಸ್ವಾಭಾವಿಕವಾಗಿ ಸುರಕ್ಷಿತ ಅಂತರ ಮತ್ತು ಸರಕಾರದಿಂದ ನೀಡುವ ಮಾರ್ಗಸೂಚಿಗಳನ್ನು ಶಾಲೆಗಳಲ್ಲಿ ಲಭ್ಯವಿರುವ ಕನಿಷ್ಟ ಮೂಲಭೂತ ಸೌಲಭ್ಯಗಳಲ್ಲಿ ಪಾಲಿಸುವುದು ಕಷ್ಟ ಸಾಧ್ಯ ಎಂದು ತನ್ವೀರ್ ಸೇಠ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News