ಗದಗ: ಕೆಎಂಡಿಸಿಯಲ್ಲಿ ಸಬ್ಸಿಡಿ ವಂಚನೆ ಭೇದಿಸಿದ ಎಸಿಬಿ ಎಸ್ಪಿ ಬಿ.ಎಸ್.ನ್ಯಾಮೇಗೌಡ ನೇತೃತ್ವದ ತಂಡ

Update: 2020-06-12 13:15 GMT

ಗದಗ, ಜೂ.12: ಗದಗ ಜಿಲ್ಲೆಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ(ಕೆಎಂಡಿಸಿ) ನಡೆಯುತ್ತಿದ್ದ ಲಕ್ಷಾಂತರ ರೂಪಾಯಿ ಸಬ್ಸಿಡಿ ವಂಚನೆ ಪ್ರಕರಣ ಭೇದಿಸಿರುವ ಬೆಳಗಾವಿ ವಲಯದ ಎಸಿಬಿ ಎಸ್ಪಿ ಬಿ.ಎಸ್.ನ್ಯಾಮೇಗೌಡ ನೇತೃತ್ವದ ಅಧಿಕಾರಿಗಳ ತಂಡ, ಒಟ್ಟು 25 ಫಲಾನುಭವಿಗಳಿಗೆ ಸೇರಬೇಕಾಗಿದ್ದ 45 ರಿಂದ 50 ಲಕ್ಷದಷ್ಟು ಸಬ್ಸಿಡಿ ಹಣವನ್ನು ಅರ್ಹರ ಕೈ ಸೇರುವಂತೆ ಮಾಡಿದ್ದಾರೆ.

ವ್ಯಕ್ತಿಯೊಬ್ಬರ ದೂರಿನನ್ವಯ ಕಾರ್ಯಾಚರಣೆಗಿಳಿದ ಎಸಿಬಿ ಅಧಿಕಾರಿಗಳು, ಜಿಲ್ಲಾ ಕೆಎಂಡಿಸಿ ವ್ಯವಸ್ಥಾಪಕ ಝಾಕೀರ್ ಹುಸೇನ್ ಕುಕನೂರ ಮತ್ತು ಕಂಪ್ಯೂಟರ್ ಆಪರೇಟರ್ ಅಕ್ಬರ್ ಹಳೆಮಸೂತಿ ಎಂಬವರನ್ನು ಬಂಧಿಸಿ, ಶ್ರಮಜೀವಿಗಳಿಗೆ ಆಸರೆಯಾಗುವ ಯೋಜನೆಯನ್ನು ಯಶಸ್ವಿಗೊಳಿಸಿದ್ದಾರೆ.

ಬಿ.ಎಸ್.ನ್ಯಾಮೇಗೌಡ

ಏನಿದು ಪ್ರಕರಣ?: ಆರ್ಥಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಸಮುದಾಯದ ಚಾಲಕರಿಗೆ, ಟ್ಯಾಕ್ಸಿ ಖರೀದಿಸಿ ಸ್ವಯಂ ಉದ್ಯೋಗ ಕಂಡುಕೊಳ್ಳಲು ಕೆಎಂಡಿಸಿ ತಲಾ 3 ಲಕ್ಷ ರೂ. ಸಬ್ಸಿಡಿ ನೀಡುತ್ತದೆ. ಉಳಿದ ಮೊತ್ತವನ್ನು ಫಲಾನುಭವಿ ಬ್ಯಾಂಕ್‍ನಿಂದ ಸಾಲದ ರೂಪದಲ್ಲಿ ಪಡೆದುಕೊಳ್ಳಬೇಕು.

ಗದಗ ಜಿಲ್ಲೆಯಲ್ಲಿ 2018–19ನೆ ಸಾಲಿನಲ್ಲಿ ಈ ಯೋಜನೆಯಡಿ 25 ಫಲಾನುಭವಿಗಳು ಆಯ್ಕೆಯಾಗಿದ್ದರು. ಆದರೆ, ಸಬ್ಸಿಡಿ ಬಿಡುಗಡೆ ಮಾಡಲು ನಿಗಮದ ವ್ಯವಸ್ಥಾಪಕರು, ತಮ್ಮದೇ ಕಚೇರಿಯ ಕಂಪ್ಯೂಟರ್ ಆಪರೇಟರ್ ಅವರನ್ನು ಮಧ್ಯವರ್ತಿಯನ್ನಾಗಿ ಬಳಸಿಕೊಂಡು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಕೊಡಲು ನಿರಾಕರಿಸಿದವರ ‘ಚೆಕ್’ಗಳನ್ನು ಇವರಿಬ್ಬರೂ ಸೇರಿ ತಡೆಹಿಡಿದಿದ್ದರು ಎನ್ನುವ ದೂರುಗಳು ಕೇಳಿಬಂದಿತ್ತು.

ಸಾಲ ಮಾಡಿ, ಟ್ಯಾಕ್ಸಿ ಖರೀದಿಸಲು ಮುಂದಾದ ಫಲಾನುಭವಿಗಳು ಸಬ್ಸಿಡಿ ಮೊತ್ತಕ್ಕಾಗಿ 6 ತಿಂಗಳಿಂದ ನಿಗಮದ ಕಚೇರಿಗೆ ಅಲೆದು ಸುಸ್ತಾಗಿದ್ದರು. 3 ಲಕ್ಷ ಸಬ್ಸಿಡಿ ಮೊತ್ತದ ಚೆಕ್ ನೀಡಬೇಕಾದರೆ, 40 ಸಾವಿರ ಲಂಚ ನೀಡಲೇಬೇಕು ಎಂಬ ಷರತ್ತನ್ನು ಅಧಿಕಾರಿ ಫಲಾನುಭವಿಗಳ ಮುಂದಿಟ್ಟಿದ್ದರು. ಅಧಿಕಾರಿಯ ವರ್ತನೆಯಿಂದ ಬೇಸತ್ತ ಫಲಾನುಭವಿಯಲ್ಲಿ ಒಬ್ಬರಾದ ವ್ಯಕ್ತಿ, ಎಸಿಬಿಗೆ ದೂರು ಸಲ್ಲಿಸಿದ್ದರು.

ಈ ದೂರು ಆಧರಿಸಿ, ಬೆಳಗಾವಿ ವಲಯದ ಎಸಿಬಿ ಎಸ್ಪಿ ಬಿ.ಎಸ್.ನ್ಯಾಮೇಗೌಡ ಅವರು ಡಿವೈಎಸ್ಪಿ ಎನ್.ವಾಸುದೇವರಾಮ್ ನೇತೃತ್ವದ ಎಸಿಬಿ ತನಿಖಾಧಿಕಾರಿಗಳ ತಂಡ ರಚಿಸಿದ್ದು, ಮೇ 25ರಂದು ದಾಳಿ ನಡೆಸಿ, ದೂರುದಾರನಿಂದ ಆರೋಪಿಗಳು ಲಂಚದ ಹಣ ಪಡೆಯುವ ವೇಳೆ ವಶಕ್ಕೆ ಪಡೆದಿದ್ದರು. ನಂತರ ನಿಗಮದ ವ್ಯವಸ್ಥಾಪಕ ಮತ್ತು ಕಂಪ್ಯೂಟರ್ ಆಪರೇಟರ್ ಅಮಾನತುಗೊಂಡಿದ್ದರು.

ಇದರ ಬೆನ್ನಲ್ಲೇ, ಅಧಿಕಾರಿಗಳು ಕಡತಗಳನ್ನು ಪರಿಶೀಲಿಸಿದಾಗ ಮಹಾ ವಂಚನೆ ಬೆಳಕಿಗೆ ಬಂತು. ಒಟ್ಟು 25 ಫಲಾನುಭವಿಗಳಿಗೆ ಸೇರಿದ ಲಕ್ಷಾಂತರ ಮೊತ್ತದ ಸಬ್ಸಿಡಿ ಚೆಕ್‍ಗಳನ್ನು ವಿತರಿಸದೆ ಹಾಗೆಯೇ ಇಟ್ಟುಕೊಂಡಿರುವುದು ಗಮನಕ್ಕೆ ಬಂದಿತ್ತು. ಬಳಿಕ ಜೂ.8ರಂದು ಎಸಿಬಿ ಎಸ್ಪಿ ಬಿ.ಎಸ್.ನ್ಯಾಮೇಗೌಡ ಸೂಚನೆಯಂತೆ, ಎಸಿಬಿ ಅಧಿಕಾರಿಗಳು ಮತ್ತು ನಿಗಮದ ಪ್ರಭಾರ ಅಧಿಕಾರಿ ಅಕ್ಬರಸಾಬ್ ಕುರ್ತಕೋಟಿ ಅವರ ಸಮ್ಮುಖದಲ್ಲಿ ಎಲ್ಲ ಫಲಾನುಭವಿಗಳಿಗೆ ಏಕಕಾಲದಲ್ಲಿ ಸಬ್ಸಿಡಿ ಚೆಕ್ ವಿತರಣೆ ನಡೆಯಿತು.

ಪ್ರಶಂಸೆ: ಎಸಿಬಿ ಎಸ್ಪಿ ಬಿ.ಎಸ್.ನ್ಯಾಮೇಗೌಡ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಅರ್ಹ ಫಲಾನುಭವಿಗಳಿಗೆ ನ್ಯಾಯ ಒದಗಿಸುವಂತೆ ಮಾಡಿರುವ ಕಾರ್ಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ಭ್ರಷ್ಟಾಚಾರ ಪ್ರಕರಣಗಳನ್ನು ತಡೆಗಟ್ಟುವ ಸಲುವಾಗಿಯೇ ಎಸಿಬಿ ತಂಡ ಕಾರ್ಯ ನಿರ್ವಹಿಸುತ್ತಿದೆ. ಬರೀ ಕೆಎಂಡಿಸಿ ಮಾತ್ರವಲ್ಲ, ಯಾವುದೇ ಇಲಾಖೆಯಲ್ಲೂ ಲಂಚ ಸ್ವೀಕಾರ ಕಾನೂನು ಬಾಹಿರ ಚಟುವಟಿಕೆಗಳ ಕುರಿತು ದೂರು ಬಂದಲ್ಲಿ ಕಾನೂನುರೀತಿಯ ಕ್ರಮಕ್ಕೆ ಬದ್ಧ.

-ಬಿ.ಎಸ್.ನ್ಯಾಮೇಗೌಡ, ಎಸ್ಪಿ, ಎಸಿಬಿ, ಬೆಳಗಾವಿ ವಲಯ

ಕಳೆದ ಎರಡು ವರ್ಷಗಳಿಂದ ಈ ಯೋಜನೆಯ ಫಲಾನುಭವಿ ಆಗಲು ಕಚೇರಿಗೆ ಅಲೆಯುತ್ತಿದ್ದೆ. ಇಲ್ಲಿನ ಸ್ಥಳೀಯ ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಟ್ಟ ಕಾರಣ ನಮಗೆ ಈ ಯೋಜನೆ ದೊರೆಯುವುದಿಲ್ಲ ಎನ್ನುವ ಭಾವನೆ ಮೂಡಿತು. ಆದರೆ, ಎಸಿಬಿ ಕಾರ್ಯಾಚರಣೆಯಿಂದ ನಮಗೆ ನ್ಯಾಯ ದೊರೆತಿದೆ.

-ಮುಬಾರಕ್ ಪಾಷ(ಹೆಸರು ಬದಲಾಯಿಸಲಾಗಿದೆ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News