ಕಾವೇರಿ ಕೂಗು ಅಭಿಯಾನಕ್ಕೆ ಹೇಗೆ ಅವಕಾಶ ನೀಡಿದಿರಿ?: ಸರಕಾರಕ್ಕೆ ಹೈಕೋರ್ಟ್ ಪ್ರಶ್ನೆ

Update: 2020-06-12 13:13 GMT

ಬೆಂಗಳೂರು, ಜೂ.12: ಕಾವೇರಿ ನದಿಯ ಪುನಶ್ಚೇತನಕ್ಕಾಗಿ ಇಶಾ ಫೌಂಡೇಷನ್‍ನ ಸ್ಥಾಪಕ ಜಗ್ಗಿ ವಾಸುದೇವ್ ನಡೆಸುತ್ತಿರುವ ಕಾವೇರಿ ಕೂಗು(ಕಾವೇರಿ ಕಾಲಿಂಗ್) ಅಭಿಯಾನಕ್ಕೆ ಸರಕಾರ ಹೇಗೆ ಅವಕಾಶ ನೀಡಿತು ಎಂಬುದರ ಬಗ್ಗೆ ಮಾಹಿತಿ ನೀಡಲು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ.

ಇಶಾ ಫೌಂಡೇಷನ್‍ನ ಅಭಿಯಾನದಲ್ಲಿ ಜನರಿಂದ ಅನಧಿಕೃತ ಮತ್ತು ಒತ್ತಾಯಪೂರ್ವಕವಾಗಿ ಹಣ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿ ವಕೀಲ ಎ.ವಿ.ಅಮರನಾಥನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ಇ.ಎಸ್.ಇದ್ರೇಂಶ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಕಾವೇರಿ ಕೂಗು ಅಭಿಯಾನಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರಕಾರದೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಇಶಾ ಫೌಂಡೇಷನ್ ಮಧ್ಯಂತರ ಅರ್ಜಿ ಸಲ್ಲಿಸಿದೆ. ಹಾಗಾದರೆ, ಚರ್ಚೆಗೆ ಹಾಗೂ ಅಭಿಯಾನಕ್ಕೆ ಸರಕಾರ ಹೇಗೆ ಅವಕಾಶ ನೀಡಿತು ಎಂಬುದರ ಬಗ್ಗೆ ಮಾಹಿತಿ ನೀಡಲು ಸರಕಾರಕ್ಕೆ ನ್ಯಾಯಪೀಠವು ಸೂಚನೆ ನೀಡಿತು.   

ಇಶಾ ಫೌಂಡೇಷನ್, ಕಾವೇರಿ ಕಾಲಿಂಗ್ ಹೆಸರಿನಲ್ಲಿ ಸರಕಾರಿ ಭೂಮಿಯಲ್ಲಿ ಗಿಡಗಳನ್ನು ನೆಡುತ್ತಿದೆ. ಅದಕ್ಕಾಗಿ ಜನರಿಂದ ಹಣ ಸಂಗ್ರಹ ಮಾಡುತ್ತಿದೆ ಎಂದು ಅಮರನಾಥ್ ಅವರು ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಫೌಂಡೇಷನ್ ಕೈಗೊಂಡಿರುವ ಯೋಜನೆಯ ಸಾಧಕ ಮತ್ತು ಬಾಧಕಗಳ ಕುರಿತು ಅಧ್ಯಯನ ಮಾಡದೆಯೇ ಖಾಸಗಿ ಸಂಸ್ಥೆಯೊಂದಕ್ಕೆ ತನ್ನ ಭೂಮಿಯಲ್ಲಿ ಗಿಡನೆಡಲು ಸರಕಾರ ಹೇಗೆ ಅವಕಾಶ ನೀಡಿದೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಫೌಂಡೇಷನ್ ತನ್ನ ಅಭಿಯಾನದಲ್ಲಿ 10,626 ಕೋಟಿ ರೂ.ದೇಣಿಗೆ ಸಂಗ್ರಹಿಸುವ ನಿರೀಕ್ಷೆಯಿದ್ದು, ಜನರಿಂದ ಇಷ್ಟು ಭಾರಿ ಪ್ರಮಾಣದ ಹಣ ಸಂಗ್ರಹಿಸುವುದು ಕಳವಳಕಾರಿಯಾಗಿದೆ ಎಂದು ವಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News