ವಸತಿ ಶಾಲೆ: ಶೇ.25 ಸೀಟು ಸ್ಥಳೀಯ ಮಕ್ಕಳಿಗೆ ಮೀಸಲು- ಗೋವಿಂದ ಕಾರಜೋಳ

Update: 2020-06-12 18:28 GMT

ತುಮಕೂರು, ಜೂ.12: ರಾಜ್ಯದಲ್ಲಿ ಇನ್ನು ಮುಂದೆ ವಸತಿ ಶಾಲೆಗಳ ಪ್ರವೇಶಾತಿಯಲ್ಲಿ ಶೇ.25ರಷ್ಟು ಸೀಟುಗಳನ್ನು ಸ್ಥಳೀಯ ಮಕ್ಕಳಿಗೆ ಮೀಸಲಿಡಲು ತೀರ್ಮಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಸಚಿವ ಗೋವಿಂದ ಎಂ. ಕಾರಜೋಳ ತಿಳಿಸಿದ್ದಾರೆ.

ಸಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿ ರಂಗನಾಥಪುರದಲ್ಲಿ ಪರಿಶಿಷ್ಟ ವರ್ಗಗಳ ಇಲಾಖೆಯ ವಸತಿ ಶಾಲಾ ಸಮುಚ್ಚಯದ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಸುಮಾರು 135 ವಸತಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಈ ವಸತಿ ಶಾಲೆಗಳು ಇರುವ ಗ್ರಾಮಗಳ ಮಕ್ಕಳಿಗೆ ಇದುವರೆಗೂ ಪ್ರವೇಶಕ್ಕೆ ಅವಕಾಶ ಕಲ್ಪಿಸಿರಲಿಲ್ಲ. ಕೇವಲ ವಸತಿ ಶಾಲೆಯನ್ನು ಹೊರಗಿನಿಂದ ನೋಡಿ ಸಮಾಧಾನ ಪಡಬೇಕಾಗಿತ್ತು. ಆದರೆ ಇದುವರೆಗೂ ಕಾನೂನನ್ನು ಬದಲಿಸಿ ಇನ್ನು ಮುಂದೆ ವಸತಿ ಶಾಲೆಗಳು ಇರುವ ತಾಲೂಕಿನ ಸ್ಥಳೀಯ ಮಕ್ಕಳಿಗೆ ಶೇ.25 ರಷ್ಟು ಸೀಟುಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದರು.

ವಸತಿ ಶಾಲೆಗಳು ಇರುವ ಗ್ರಾಮಗಳಲ್ಲಿ ಸ್ಥಳೀಯ ಮಕ್ಕಳು ಕೇವಲ ಕಟ್ಟಡ ನೋಡಿ ಸಂತೋಷ ಪಡಬಾರದು. ಈ ವಸತಿ ಶಾಲೆಯ ಸೌಲಭ್ಯವೂ ಸ್ಥಳೀಯ ಮಕ್ಕಳಿಗೆ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ಕಾನೂನಿಗೆ ತಿದ್ದುಪಡಿ ತರಲಾಗಿದೆ. ಸ್ಥಳೀಯ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉತ್ತೀರ್ಣರಾಗಿ ಸರಕಾರ ಒದಗಿಸಿರುವ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಸಚಿವರು ನುಡಿದರು.

ಸಮಾಜ ಕಲ್ಯಾಣ ಇಲಾಖೆಯಡಿ ಸುಮಾರು 4 ಲಕ್ಷ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಇಡೀ ರಾಜ್ಯದಲ್ಲಿ ಶೇ. 96 ರಷ್ಟು ಫಲಿತಾಂಶ ಪಡೆದು ಮುಂದಿದ್ದಾರೆ. ಎಲ್ಲರೂ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರಲ್ಲದೇ, ಸಮಾಜದಲ್ಲಿ ಶೋಷಿತರಾಗಿ, ಶಿಕ್ಷಣದಲ್ಲಿ ವಂಚಿತರಾಗಿದ್ದ ಮಕ್ಕಳಿಗೆ ಸರಕಾರ ಉತ್ತಮ ವ್ಯವಸ್ಥೆ ಕಲ್ಪಿಸುತ್ತಿದೆ. ವಸತಿ ಶಾಲೆಗಳಲ್ಲಿ ಓದುವಂತಹ ಮಕ್ಕಳು ಕಳೆದ ವರ್ಷ ಇಲಾಖೆಯಲ್ಲಿ 29 ಸಾವಿರ ಕೋಟಿ ಹಣ ಇತ್ತು. ಈ ಹಣವನ್ನು ಖರ್ಚು ಮಾಡಿ ಶೇ.95 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.

ಸಿರಾ ತಾಲೂಕು ಬುಕ್ಕಾಪಟ್ಟಣದ ರಂಗನಾಥಪುರದಲ್ಲಿ ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ಪರಿಶಿಷ್ಟ ವರ್ಗಗಳ ವಸತಿ ಶಾಲೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಶೀಘ್ರವಾಗಿ ಈ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಮಕ್ಕಳ ಕಲಿಕೆಗೆ ಅನುವು ಮಾಡಿಕೊಡಲಾಗುವುದು ಎಂದು ಸಚಿವ ಕಾರಜೋಳ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಸುಮಾರು 19 ಕೋಟಿ ರೂ. ವೆಚ್ಚದಲ್ಲಿ ಈ ವಸತಿ ಶಾಲೆ ನಿರ್ಮಾಣ ಮಾಡಲಾಗುತ್ತಿದೆ.  ನಮ್ಮ ಕ್ಷೇತ್ರದಲ್ಲಿ 5 ಹಾಸ್ಟೆಲ್ ನಿರ್ಮಾಣಕ್ಕೆ 125 ರಿಂದ 130 ಕೋಟಿ ರೂ. ಹಣ ತಂದು ನಿರ್ಮಾಣ ಮಾಡಲಾಗುತ್ತಿದೆ ಎಂದರಲ್ಲದೇ ಗುತ್ತಿಗೆದಾರರು ಆದಷ್ಟು ಬೇಗ ಈ ವಸತಿ ಶಾಲೆಯ ಕಟ್ಟಡ ಕಾಮಗಾರಿ ಮುಗಿಸಬೇಕು ಎಂದು ಸೂಚನೆ ನೀಡಿದರು.

ಮತ್ತೊಂದು ಕಾರ್ಯಕ್ರಮದಲ್ಲಿ ಮಧುಗಿರಿ ಪಟ್ಟಣದಲ್ಲಿ 1232 ಚದರ ಮೀಟರ್ ಅಳತೆಯ 3.58 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಲೋಕೋಪಯೋಗಿ ಇಲಾಖೆಯ ಮಧುಗಿರಿ ಉಪವಿಭಾಗದ ನೂತನ ಕಟ್ಟಡವನ್ನು ಸಚಿವರಾದ ಗೋವಿಂದ ಎಂ. ಕಾರಜೋಳ ಉದ್ಘಾಟಿಸಿದರು.

ಸಂಸದ ಜಿ.ಎಸ್.ಬಸವರಾಜು,ಶಾಸಕರಾದ ವೀರಭದ್ರಯ್ಯ, ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ, ಜಿ.ಪಂ.ಸಿಇಓ ಶುಭ ಕಲ್ಯಾಣ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರೇಮಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News