ಮೈಶುಗರ್ ಆರಂಭಕ್ಕೆ ಅಗತ್ಯ ಕ್ರಮ: ಡಿಸಿಎಂ ಡಾ.ಅಶ್ವಥ್ ನಾರಾಯಣ

Update: 2020-06-12 18:34 GMT

ಮಂಡ್ಯ, ಜೂ.12: ಮೈಶುಗರ್ ಕಾರ್ಖಾನೆಯನ್ನು ಆರಂಭಿಸಲು ಅಗತ್ಯ ಕ್ರಮವಹಿಸಲಾಗಿದೆ. ಕಾರ್ಯಾಚರಣೆ ಮತ್ತು ನಿರ್ವಹಣೆ(ಒ ಅಂಡ್ ಎಂ)ಯನ್ನು ಗುತ್ತಿಗೆ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ತಿಳಿಸಿದ್ದಾರೆ.

ಶುಕ್ರವಾರ ನಗರದ ಮಂಡ್ಯ ವಿಶ್ವವಿದ್ಯಾಲಯ ಹಾಗೂ ಮಹಿಳಾ ಸರಕಾರಿ(ಸ್ವಾಯತ್ತ) ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ವರ್ಷವೇ  ಕಾರ್ಖಾನೆ ಆರಂಭಕ್ಕೆ ಕ್ರಮ ವಹಿಸಲಾಗುವುದು ಎಂದರು.

ಸರಕಾರಿ ಸ್ವಾಮ್ಯದಲ್ಲೇ ನಡೆಸಲಾಗುವುದಿಲ್ಲವೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾರ್ಖಾನೆ ಜವಾಬ್ಧಾರಿ ಯಾರು ಹೊರಬೇಕೆಂಬುದು ಮುಖ್ಯವಲ್ಲ. ರೈತರಿಗೆ ಅನುಕೂಲವಾಗಬೇಕು ಎಂಬುದು ಸಿಎಂ ಯಡಿಯೂರಪ್ಪ ಅವರ ತೀರ್ಮಾನವಾಗಿದೆ ಎಂದು ಹೇಳಿದರು. ಜಿಲ್ಲೆಯ ಜನರು ಜೆಡಿಎಸ್‍ನವರಿಗೆ ಎಲ್ಲಾ ರೀತಿಯ ಅಧಿಕಾರ ಕೊಟ್ಟಿದ್ದರು. ಆದರೆ, ಕಾರ್ಖಾನೆ ನಡೆಸಲು ಏಕೆ ಆಗಲಿಲ್ಲ. ಕನ್ನಡಿ ಹಿಡಿದು ನೋಡಿದರೆ ಜೆಡಿಎಸ್ ಶಾಸಕರ ಪ್ರಶ್ನೆಗೆ ಉತ್ತರ ಅಲ್ಲೇ ಸಿಗುತ್ತದೆ ಎಂದು ಅವರು ವ್ಯಂಗ್ಯವಾಡಿದರು.

ಗುತ್ತಿಗೆ ಅಥವಾ ಒ ಅಂಡ್ ಎಂ ಮೂಲಕ ಕಾರ್ಖಾನೆ ಆರಂಭಿಸಲು ಸರಕಾರ ಸಿದ್ದವಾಗಿದೆ. ಅರ್ಹರು ಬಂದರೆ ಈ ವರ್ಷವೇ ಕಾರ್ಖಾನೆ ಆರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಎಂ.ಟಿ.ಬಿ.ನಾಗರಾಜು, ಎಚ್.ವಿಶ್ವನಾಥ್, ಸಿ.ಪಿ.ಯೋಗೇಶ್ವರ್, ಆರ್.ಶಂಕರ್ ಪರಿಷತ್ ಚುನಾವಣೆ ಟಿಕೆಟ್ ಆಕಾಂಕ್ಷಿತರಾಗಿದ್ದು, ಶಂಕರ್ ಅವರೊಬ್ಬರಿಗೆ ಮಾತ್ರ ಪರಿಷತ್ ಚುನಾವಣೆಗೆ ಟಿಕೆಟ್ ನೀಡುವ ಭರವಸೆ ನೀಡಲಾಗಿತ್ತು. ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಅಶ್ವಥ್ ನಾರಾಯಣ ಪ್ರತಿಕ್ರಿಯಿಸಿದರು.

ಮಂಡ್ಯ ವಿವಿಗೆ ಕಾಯಕಲ್ಪ:
ಇದಕ್ಕೂ ಮುನ್ನ ಮಂಡ್ಯ ವಿವಿ ಪರಿಶೀಲಸಿದ ಅಶ್ವಥ್ ನಾರಾಯಣ, ವಿವಿಗೆ ಅಭಿವೃದ್ಧಿಗೆ ಸರಕಾರ ಕ್ರಮವಹಿಸಲಿದೆ. ಜಿಲ್ಲೆಯಲ್ಲಿ ಕೆ.ವಿ.ಶಂಕರಗೌಡರು ಶಿಕ್ಷಣ ಕ್ರಾಂತಿಗೆ ಅಡಿಗಲ್ಲು ಹಾಕಿದ್ದು, ಅಂತೆಯೇ ವಿವಿಯಲ್ಲೂ ಶಿಕ್ಷಣ ಕ್ರಾಂತಿ ಆಗಲಿದೆ ಎಂದರು.

ಎದುರಾಗಿದ್ದ ಕೆಲವು ತಾಂತ್ರಿಕ ತೊಂದರೆಗಳು ನಿವಾರಣೆಯಾಗಿವೆ. ಸದ್ಯದಲ್ಲೇ ಉಪಕುಲಪತಿಯನ್ನು ನೇಮಕ ಮಾಡಲಾಗುವುದು. ವಿವಿಯ 31 ಎಕರೆ ಪ್ರದೇಶದಲ್ಲಿ 6 ಎಕರೆ ಒತ್ತುವರಿಯಾಗಿದ್ದು, ತೆರವಿಗೆ ಕ್ರಮವಹಿಸಲಾಗುವುದು ಎಂದು ಅವರು ತಿಳಿಸಿದರು.

ಶಾಸಕ ಎಂ.ಶ್ರೀನಿವಾಸ್, ಪದವಿ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಎಸ್ಪಿ ಕೆ.ಪರಶುರಾಂ, ಎಎಸ್ಪಿ ಡಾ.ಶೋಭಾರಾಣಿ, ಇತರೆ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News