ಕೃಷಿ ಅಧಿಕಾರಿಗಳೂ ಕೊರೋನ ವಾರಿಯರ್ಸ್: ಸಚಿವ ಬಿ.ಸಿ.ಪಾಟೀಲ್

Update: 2020-06-12 18:39 GMT

ಬೆಂಗಳೂರು, ಜೂ. 12: ಕೊರೋನ ಸೋಂಕಿನ ಸಂದರ್ಭದಲ್ಲಿ ರೈತರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ ಕೃಷಿ ಅಧಿಕಾರಿಗಳೂ ಕೊರೋನ ವಾರಿಯರ್ಸ್ ಗಳಂತೆಯೇ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿ ನಡೆದ 2020-21ನೆ ಸಾಲಿನ ಮುಂಗಾರು-ಹಿಂಗಾರು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಇಲಾಖೆ ಮುಳ್ಳಿನ ಹಾಸಿಗೆ ಇದ್ದಂತೆ. ಅನೇಕ ಸವಾಲುಗಳನ್ನು ಇಲ್ಲಿ ಎದುರಿಸಬೇಕಾಗುತ್ತದೆ. ಕೃಷಿ ಮತ್ತು ರೈತರಿಗಾಗಿ ದುಡಿಯುವ ಅವಕಾಶ ತಮಗೆ ಸಿಕ್ಕಿದೆ. ಕೃಷಿ ಅಭಿವೃದ್ಧಿ ಹೊಂದಿದರೆ ಸರಕಾರಕ್ಕೂ ಒಳ್ಳೆಯ ಹೆಸರು ಬರುತ್ತದೆ. ಜೊತೆಗೆ ದೇಶದ ಜನತೆಗೆ ಅನ್ನವೂ ಸಿಗುತ್ತದೆ ಎಂದು ಹೇಳಿದರು.

ಕೊರೋನ ಸೋಂಕಿನ ಸಂಕಷ್ಟದ ಸಂದರ್ಭ ಒಂದು ರೀತಿಯಲ್ಲಿ ಯುದ್ಧದಂತೆ. ಸೋಂಕಿದೆ ಎಂದು ನಾನು ಸುಮ್ಮನೆ ಕೂರದೆ ಮೂವತ್ತು ದಿನಗಳಲ್ಲಿ ರಾಜ್ಯದ ಮೂವತ್ತು ಜಿಲ್ಲೆಗಳ ಪ್ರವಾಸ ಮಾಡಿ ರೈತರ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಬಿ.ಸಿ.ಪಾಟೀಲ್ ಮಾಹಿತಿ ನೀಡಿದರು.

ಲಾಕ್‍ಡೌನ್ ಹಿನ್ನೆಲೆಯಲ್ಲಿ ರೈತರಿಗೆ ತೊಂದರೆಯಾಗದಂತೆ ಗ್ರೀನ್ ಪಾಸ್, ಕೃಷಿ ವಾರ್ ರೂಂ ಸ್ಥಾಪನೆ ಮಾಡಿದ್ದರಿಂದ ರೈತರಿಗೆ ಬಹಳ ಅನುಕೂಲವಾಗಿದೆ. ಇದೇ ವೇಳೆ ನಕಲಿ ಬಿತ್ತನೆ ಬೀಜ ಮಾರಾಟ ಮಾಡುವವರ ವಿರುದ್ಧ ಸಮರ ಸಾರಲಾಗಿದೆ. ಯಾವುದೇ ಒತ್ತಡಗಳಿಗೆ ಮಣಿಯದೆ ದೃಢ ಮನಸ್ಸಿನಿಂದ ರೈತರ ಪರವಾಗಿ ಕೆಲಸ ಮಾಡಿದ್ದೇನೆ ಎಂದರು.

ಸೋಯಾ ಬಿತ್ತನೆ ಬೀಜ ಆಂಧ್ರ, ಮಧ್ಯಪ್ರವೇಶದಿಂದ ಪೂರೈಕೆಯಾಗಿದ್ದು, ನೆರೆ ಹಾವಳಿ ಹಿನ್ನೆಲೆಯಲ್ಲಿ ಬಹುತೇಕ ಕಡೆಗಳಲ್ಲಿ ಸೋಯಾ ಮೊಳಕೆ ಹೊಡೆದಿಲ್ಲ. ರೈತರು ಯಾವುದೇ ಬೆಳೆ ಬೆಳೆಯಲು ಭೂಮಿ ಮತ್ತು ವಾತಾವರಣದ ಬಗ್ಗೆ ಮೊದಲೇ ಜಾಗೃತರಾಗಿರಬೇಕಾಗುತ್ತದೆ. ಈ ಕುರಿತು ಅಧಿಕಾರಿಗಳು ಮುನ್ನಚ್ಚರಿಕೆ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಕೃಷಿ ಪದವೀಧರರಿಗೆ ಅನುಕೂಲ: ರಾಜ್ಯ ಸರಕಾರ ಕೃಷಿ ಭೂಮಿ ಖರೀದಿ ಮಿತಿಗೆ ಹೇರಿದ್ದ ನಿರ್ಬಂಧ ಸಡಿಲಿಸಿರುವುದು ಕೃಷಿ ಪದವಿ ಪಡೆದಿರುವ ಯುವಕರು ಕೃಷಿಯಲ್ಲಿ ತೊಡಗಿಕೊಳ್ಳಲು ಅನುಕೂಲವಾಗಲಿದೆ. ಕರ್ನಾಟಕದಲ್ಲಿ ಮಾತ್ರ ಕೃಷಿ ಭೂಮಿ ಖರೀದಿಗೆ ನಿರ್ಬಂಧ ಇತ್ತು. ಆ ನಿರ್ಬಂಧವನ್ನು ನಿನ್ನೆ ನಡೆದ ಸಂಪುಟ ಸಭೆ ತೆರವುಗೊಳಿಸಲು ತೀರ್ಮಾನಿಸಿದ್ದು, ಈ ಬಗ್ಗೆ ಕಂದಾಯ ಇಲಾಖೆ ಶೀಘ್ರವೇ ಮಾರ್ಗಸೂಚಿ ಪ್ರಕಟಿಸಲಿದೆ ಎಂದರು.

ಕೊರೋನ ಹಿನ್ನೆಲೆಯಲ್ಲಿ ಪರಿಸ್ಥಿತಿ ಬದಲಾಗಿದೆ. ವಾರ್ಷಿಕ ಕೃಷಿ ವಿವಿಗಳಿಂದ ನಾಲ್ಕು ಲಕ್ಷ ಮಂದಿ ಪದವೀಧರರು ಹೊರಬರುತ್ತಿದ್ದು, ಎಲ್ಲರಿಗೂ ಉದ್ಯೋಗಾವಕಾಶ ಕಷ್ಟ ಸಾಧ್ಯ. ಹೀಗಾಗಿ ಸರಕಾರದ ಜಾರಿಗೆ ತಂದಿರುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯಿಂದ ಕೃಷಿಯಲ್ಲಿ ತೊಡಗಿಕೊಳ್ಳುವವರಿಗೆ ನೆರವಾಗಲಿದೆ ಎಂದರು.

ಕೃಷಿ ಭೂಮಿಯಲ್ಲಿ ಕೃಷಿ, ಆ ಸಂಬಂಧಿತ ಕೈಗಾರಿಕೆಗಳು, ಅದಕ್ಕೆ ಪೂರಕ ಚಟುವಟಿಕೆಗಳನ್ನು ನಡೆಸಬಹುದಾಗಿದೆ. ಸಂಸ್ಕರಣಾ ಘಟಕ, ಆಹಾರ ಸಂಸ್ಕರಣೆಗೆ ಅನುಕೂಲವಾಗಲಿದೆ ಎಂದ ಅವರು, ಯಾವುದೇ ಕಾರಣಕ್ಕೂ ಕೃಷಿ ಭೂಮಿಯನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News