ರೈತರ ಬಾಯಿಗೆ ಮಣ್ಣು ಹಾಕಲು ಹೊರಟ ಯಡಿಯೂರಪ್ಪ: ಬಸವರಾಜ ಹೊರಟ್ಟಿ

Update: 2020-06-13 14:52 GMT

ಬೆಂಗಳೂರು, ಜೂ. 13: `ತಾವು ರೈತ ನಾಯಕ ಎಂದು ಮುಖ್ಯಮಂತ್ರಿಯಾಗಿ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ, ಇದೀಗ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಇದೀಗ ರೈತರ ಬಾಯಲ್ಲಿ ಮಣ್ಣು ಹಾಕಲು ಹೊರಟಿದ್ದೀರಿ' ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿವಿಧ ಕಾರಣಗಳಿಗೆ ಸಂಕಷ್ಟಕ್ಕೆ ಸಿಲುಕಿರುವ ಅನೇಕ ರೈತರು ಈಗ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರಕಾರ ತಿದ್ದುಪಡಿ ಕಾಯ್ದೆ ಜಾರಿಯಿಂದ ಇನ್ನು ಮುಂದೆ ಇದ್ದ ಜಮೀನನ್ನು ಮಾರಾಟ ಮಾಡಿ ಹಣಕ್ಕೆ ಆಕರ್ಷಿತರಾಗಿ ಇನ್ನಷ್ಟು ಆತ್ಮಹತ್ಯೆ ಮಾಡಿಕೊಳ್ಳುವಂತಹ ವಾತಾವರಣ ನಿರ್ಮಾಣವಾಗುತ್ತಿರುವುದು ಸ್ಪಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ದಯಮಾಡಿ ರೈತರ ಮುಖವನ್ನು ಒಂದು ಸಾರಿ ತಮ್ಮ ಎದುರಿಗೆ ತಂದುಕೊಂಡು ಅವನ ಮತ್ತು ಅವನ ಕುಟುಂಬದ ನಿಜವಾದ ಪರಿಸ್ಥಿತಿಯನ್ನು ಒಮ್ಮೆ ನೋಡಿ ಎಂದು ಮನವಿ ಮಾಡಿದ್ದಾರೆ.

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ಮೂಲಕ ತರುವ ಪ್ರಯತ್ನ ಮಾಡಬೇಡಿ. ಸರಕಾರದಲ್ಲಿರುವ ಕೆಲ ಸಚಿವರು ಈ ಕಾಯ್ದೆಯಿಂದ ರೈತರಿಗಾಗುತ್ತಿರುವ ಕಿರುಕುಳ ತಪ್ಪಿಸಲೆಂದೆ ತಿದ್ದುಪಡಿ ತಂದಿರುತ್ತೇವೆನ್ನುತ್ತಾರೆ. ಐಟಿ-ಬಿಟಿಯವರು ಕೃಷಿ ಮಾಡುತ್ತಾರೆಂದು ಕೆಲವರು ಹೇಳುತ್ತಾರೆ. ಕೃಷಿ ಮಾಡುವುದು ಕಂಪ್ಯೂಟರ್ ನಲ್ಲಿ ಮಾಡುವ ಕೆಲಸವಲ್ಲ. ಅಂತಹವರು ಕೃಷಿ ಮಾಡುವುದು ಪುಸ್ತಕ ಓದಿ ಅಡುಗೆ ಮಾಡಿದಂತೆ. ನಿಮ್ಮಂಥವರು ಮುಖ್ಯಮಂತ್ರಿಗಳಾದ ಸಂದರ್ಭದಲ್ಲಿ ಇಂತಹ ಕರಾಳ ಶಾಸನವನ್ನು ತರುವುದು ಅವಿವೇಕದ ಪರಮಾವಧಿ ಎಂದು ಹೊರಟ್ಟಿ ಟೀಕಿಸಿದ್ದಾರೆ.

ಇಂತಹ ಕೆಟ್ಟ ಕಾನೂನನ್ನು ತರುವುದು ಸೂಕ್ತವಲ್ಲ. ಉಳಿಮೆಗಾಗಿ ಗೇಣಿದಾರನಿಗೆ ನೀಡಿರುವ ಜಮೀನಿಗೆ ಅನ್ವಯವಾಗುವ ಹಲವಾರು ಕಾನೂನುಗಳನ್ನು ಒಂದುಗೂಡಿಸಿ ಭೂ ಸುಧಾರಣಾ ಕಾಯ್ದೆಯನ್ನು ಜಾರಿ ಮಾಡಲಾಗಿತ್ತು. ಅದರಲ್ಲಿ ಸ್ವತಃ ಯಾರು ದುಡಿಮೆ ಮಾಡುತ್ತಾರೋ ಅವರಿಗೆ ರಕ್ಷಣೆ ಕೊಡುವಂತಹದು ಕಾನೂನಿನಲ್ಲಿತ್ತು ಹಾಗೂ ಉಳಿಮೆ ಮಾಡದೇ ಕೇವಲ ಕಂದಾಯ ದಾಖಲೆಗಳಲ್ಲಿ ಜಮೀನಿದ್ದರೆ ಅದನ್ನು ಮುಟ್ಟುಗೋಲು ಹಾಕಿಕೊಂಡು ಉಳುಮೆ ಮಾಡುವವರಿಗೆ ಆ ಜಮೀನನ್ನು ಮಂಜೂರು ಮಾಡಲಾಗುತ್ತಿತ್ತು. ಆದರೆ ಇದರಿಂದ ಐಟಿ-ಬಿಟಿ ಹಾಗೂ ಕಾರ್ಪೋರೇಟ್ ಸಂಸ್ಥೆಗಳಿಗೆ ಲಾಭವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರಕಾರ ಮತ್ತು ನೀವು ಉದ್ದಿಮೆದಾರರ ಕೈಗೊಂಬೆಯಾಗಿ ವರ್ತಿಸುತ್ತೀರಿ ಎಂಬ ಮಾತು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಆದ್ದರಿಂದ ತಕ್ಷಣ ಇದನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸುತ್ತೇನೆ. ಅಧಿವೇಶನ ಬರುವವರೆಗೆ ನೀವು ಸುಗ್ರೀವಾಜ್ಞೆ ಹೊರಡಿಸಬಾರದೆಂದು ಎಂದು ಬಸವರಾಜ ಹೊರಟ್ಟಿ, ಸಿಎಂಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News