ಬಿಎಸ್‍ಎನ್‍ಎಲ್‍ ಗೆ 38.54 ಕೋಟಿ ರೂ. ಬಾಕಿ ಉಳಿಸಿಕೊಂಡ ರಾಜ್ಯ ಸರಕಾರ !

Update: 2020-06-13 16:31 GMT

ಬೆಂಗಳೂರು, ಜೂ.13: ರಾಜ್ಯ ಸರಕಾರ ಕೊರೋನ ಲಾಕ್‍ಡೌನ್ ಹಿನ್ನೆಲೆ ಆರ್ಥಿಕವಾಗಿ ಸಂಕಷ್ಟಕ್ಕೆ ಈಡಾಗಿದ್ದು, ಇ-ಆಡಳಿತ, ಗೃಹ, ಲೋಕೋಪಯೋಗಿ, ಬಿಬಿಎಂಪಿ, ಶಿಕ್ಷಣ, ನಗರಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳಿಂದ ಸುಮಾರು 38.54 ಕೋಟಿ ರೂ. ಬಿಎಸ್ಎನ್ಎಲ್‍ ದೂರವಾಣಿ ಬಿಲ್ ಬಾಕಿ ಉಳಿಸಿಕೊಂಡಿವೆ.

2019ರ ನವೆಂಬರ್ ನಿಂದ ಇಲ್ಲಿಯವರಗೆ ಬಿಎಸ್ಎನ್ಎಲ್‍ ದೂರವಾಣಿ ಬಿಲ್‍ಅನ್ನು ರಾಜ್ಯ ಸರಕಾರ ಬಾಕಿ ಉಳಿಸಿಕೊಂಡಿದೆ. ಇಲಾಖೆಗಳ ಕಚೇರಿಗಳಲ್ಲಿರುವ ಸ್ಥಿರ ದೂರವಾಣಿ ಬಳಕೆಗೆ ಸಂಬಂಧಿಸಿದಂತೆ 34.59 ಕೋಟಿ ರೂ. ಹಾಗೂ ಅಧಿಕಾರಿ, ನೌಕರರು ಬಳಸಿಕೊಂಡಿರುವ ಮೊಬೈಲ್ ಸೇವೆಗಳಿಗೆ ಸಂಬಂಧಿಸಿ 3.95 ಕೋಟಿ ರೂ. ಬಾಕಿ ಉಳಿದಿದೆ.

ಶಾಸಕರ ದೂರವಾಣಿ ಬಿಲ್ ಬಾಕಿ: ರಾಜ್ಯ ಸರಕಾರದ ವಿವಿಧ ಇಲಾಖೆಗಳು ಮಾತ್ರವಲ್ಲದೇ ಶಾಸಕರು ಮತ್ತವರ ಕಚೇರಿಯ ದೂರವಾಣಿ ಬಿಲ್ ಕೂಡ ಬಾಕಿ ಇದೆ. ಈ ಸಂಬಂಧ ಸರಕಾರದ ಗಮನ ಸೆಳೆಯಲಾಗಿದೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಿಎಸ್ಎನ್ಎಲ್‍ ನ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಸರಕಾರಕ್ಕೆ ಪತ್ರ: ಬಾಕಿ ಉಳಿಸಿಕೊಂಡಿರುವ ಬಿಎಸ್ಎನ್ಎಲ್‍ ದೂರವಾಣಿ ಬಿಲ್ ಪಾವತಿಸಲು ಸರಕಾರದ ಇಲಾಖೆಗಳ ಮುಖ್ಯಸ್ಥರಿಗೆ ಸೂಚಿಸಬೇಕು ಎಂದು ಬಿಎಸ್ಎನ್ಎಲ್‍ ಮುಖ್ಯ ವ್ಯವಸ್ಥಾಪಕ ಸುಶೀಲ್ ಕುಮಾರ್ ಮಿಶ್ರಾ ಅವರು ಆರ್ಥಿಕ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಆರ್ಥಿಕ ಸಂಕಷ್ಟದಲ್ಲಿ ರಾಜ್ಯ ಸರಕಾರ: ಕೊರೋನ ಹಿನ್ನೆಲೆ ಸರಕಾರವೇ ಆರ್ಥಿಕ ಸಂಕಷ್ಟದಲ್ಲಿದ್ದು, ತೆರಿಗೆ ಸಂಗ್ರಹ, ಸೇವಾ ತೆರಿಗೆ, ನೋಂದಣಿ, ಅಬಕಾರಿ ಸೇರಿ ವಿವಿಧ ಮೂಲಗಳಿಂದ ಬರಬೇಕಿದ್ದ ತೆರಿಗೆ ಸರಿಯಾಗಿ ಬಾರದಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ಇದರ ನಡುವೆ ಬಾಕಿ ಬಿಲ್ ಪಾವತಿಗೆ ಮುಂದಾಗುವುದು ಕಷ್ಟಸಾಧ್ಯವಾಗಿದೆ.

ಸರಕಾರದ ಮುಖ್ಯ ಕಾರ್ಯದರ್ಶಿಗೂ ಮನವಿ ಸಲ್ಲಿಕೆ

ಬಿಎಸ್ಎನ್ಎಲ್‍ ಆರ್ಥಿಕ ಸಂಕಷ್ಟದಲ್ಲಿದ್ದು, ಸರಕಾರದ ವಿವಿಧ ಇಲಾಖೆಗಳು ಬಾಕಿ ಉಳಿಸಿಕೊಂಡಿರುವ ಹಣ ನೀಡಿದರೆ, ಅನುಕೂಲವಾಗಲಿದೆ ಎಂದು ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಇಲಾಖಾವಾರು ಪತ್ರ ಬರೆದು ಶೀಘ್ರ ಬಾಕಿ ಹಣ ಪಾವತಿಸುವಂತೆ ಸೂಚಿಸಲಾಗುವುದೆಂದು ಭರವಸೆ ನೀಡಿದ್ದಾರೆ ಎಂದು ಬಿಎಸ್ಎನ್ಎಲ್‍ ಸಿಬ್ಬಂದಿ ತಿಳಿಸಿದ್ದಾರೆ.

ಯಾವ ಇಲಾಖೆಯಿಂದ ಎಷ್ಟು ಬಿಲ್ ಬಾಕಿ?

ಇ-ಆಡಳಿತ ಇಲಾಖೆ 11,77,59,953 ರೂ., ಗೃಹ ಇಲಾಖೆ 9,53,23,581 ರೂ., ಆರೋಗ್ಯ ಇಲಾಖೆ 35,01,241 ರೂ., ಪಿಡಿಒ 5,47,60,039 ರೂ., ಕಂದಾಯ ಇಲಾಖೆ ವ್ಯಾಪ್ತಿಯ ನಾಡ ಕಚೇರಿಗಳು 2,81,06,219, ಕೃಷಿ ಇಲಾಖೆ 37,21,543 ರೂ., ಶಿಕ್ಷಣ 34,92,708 ರೂ., ಅರಣ್ಯ ಇಲಾಖೆ 19,51,259 ರೂ., ಬಿಬಿಎಂಪಿ 38,29,622 ರೂ., ಕಾರ್ಮಿಕ ಇಲಾಖೆ 3,11,780 ರೂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 4,72,900 ರೂ., ನಗರಾಭಿವೃದ್ಧಿ ಇಲಾಖೆ 11,64,577 ರೂ., ತಾಲೂಕು ಪಂಚಾಯತ್ ಗಳು 11,12,518, ಸಾರಿಗೆ 13,02,495 ರೂ. ಸೇರಿದಂತೆ ವಿವಿಧ ಇಲಾಖೆಗಳಿಂದ ಒಟ್ಟಾರೆ 34.59 ಕೋಟಿ ರೂ. ಬಾಕಿ ಬರಬೇಕಿದೆ.

ಸರಿಯಾದ ಸಮಯಕ್ಕೆ ದೂರವಾಣಿ ಬಾಕಿ ಹಣ ಪಾವತಿಯಾಗದಿದ್ದರೆ ಸೇವೆಗಳನ್ನು ವಿಸ್ತರಿಸುವುದು ಕಷ್ಟವಾಗಲಿದೆ. ಸರಕಾರದ ಇಲಾಖೆಗಳಿಗೆ ಡಿಜಿಟಲ್ ಸಂಪರ್ಕ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ತಕ್ಷಣವೇ ಪಾವತಿಸಲು ಕ್ರಮಕೈಗೊಳ್ಳಬೇಕು ಎಂದು ಸರಕಾರಕ್ಕೆ ಪತ್ರದ ಮುಖೇನ ಸೂಚಿಸಲಾಗಿದೆ.

-ಸುಶೀಲ್ ಕುಮಾರ್ ಮಿಶ್ರಾ, ಬಿಎಸ್ಎನ್ಎಲ್‍‍ ಮುಖ್ಯ ವ್ಯವಸ್ಥಾಪಕ

Writer - -ಯುವರಾಜ್ ಮಾಳಗಿ

contributor

Editor - -ಯುವರಾಜ್ ಮಾಳಗಿ

contributor

Similar News