ಕೆಆರ್​ಎಸ್ ನಲ್ಲಿ ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಿಸಿದರೆ ಉಗ್ರ ಹೋರಾಟ: ಮೈಸೂರು, ಮಂಡ್ಯದ ಪ್ರಗತಿಪರರ ಎಚ್ಚರಿಕೆ

Update: 2020-06-13 16:45 GMT

ಮಂಡ್ಯ, ಜೂ.13: ಕೆಆರ್​ಎಸ್ ಬಳಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜತೆಗೆ ಸರ್.ಎಂ.ವಿಶ್ವೇಶ್ವಯ್ಯ ಅವರ ಪ್ರತಿಮೆ ನಿರ್ಮಿಸಬಾರದು. ಒಂದು ವೇಳೆ ನಿರ್ಮಿಸಲು ಮುಂದಾದರೆ ರಾಜ್ಯವ್ಯಾಪಿ ಹೋರಾಟ ರೂಪಿಸಲಾಗುವುದು ಎಂದು ಪ್ರಗತಿಪರ ಚಿಂತಕರು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಇತಿಹಾಸ ತಜ್ಞ ಡಾ.ಪಿ.ವಿ.ನಂಜರಾಜೇ ಅರಸ್, ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಪಕ್ಕದಲ್ಲಿ ವಿಶ್ವೇಶ್ವರಯ್ಯ ಅವರ ಪ್ರತಿಮೆ ನಿರ್ಮಾಣ ಮಾಡುವುದು ಇತಿಹಾಸಕ್ಕೆ ಅಪಚಾರ ಮಾಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಶಿಕ್ಷಣ, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಸ್ತೆ, ನೀರಾವರಿ, ಕೃಷಿ, ಕೈಗಾರಿಕೆ, ಕಲೆ, ಸಾಹಿತ್ಯ ಮುಂತಾದ ಕ್ಷೇತ್ರಗಳಲ್ಲಿ ನಾಲ್ವಡಿ ಅವರ ಸಾಧನೆ ಅದ್ವಿತೀಯ. ಇಂತಹ ಶ್ರೇಷ್ಠ ಆಡಳಿತಗಾರ ನಾಲ್ವಡಿ ಅವರ ಪ್ರತಿಮೆ ನಿರ್ಮಾಣ ಮಾಡ ಹೊರಟಿರುವುದು ಸ್ವಾಗತಾರ್ಹ. ಆದರೆ, ಅವರ ಪ್ರತಿಮೆ ಪಕ್ಕದಲ್ಲೇ ನಾಲ್ವಡಿ ಅವರ ಕೈಕೆಳಗೆ ದಿವಾನರಾಗಿ ಸೇವೆ ಸಲ್ಲಿಸಿದ ವಿಶ್ವೇಶ್ವರಯ್ಯ ಅವರ ಪ್ರತಿಮೆ ನಿರ್ಮಿಸಲು ಹೊರಟಿರುವುದು ಸರಿಯಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

1907ರಿಂದ ಪ್ರಾರಂಭವಾಗಿ 1931ರಲ್ಲಿ ಮುಕ್ತಾಯವಾದ ಕೆಆರ್​ಎಸ್ ನಿರ್ಮಾಣ ಕಾರ್ಯದಲ್ಲಿ ಹಲವು ಇಂಜಿನಿರ್ ಗಳು, 5 ದಿವಾನರು ಮಹಾರಾಜರ ನಿರ್ದೇಶನದ ಮೇರೆಗೆ ದುಡಿದಿದ್ದಾರೆ. ಕೆಆರ್​ಎಸ್ ನ ಮೂಲ ಯೋಜನೆಯನ್ನು 1908ರಲ್ಲಿ ಮೊದಲು ರೂಪಿಸಿದವರು ಅಂದು ಮುಖ್ಯ ಇಂಜಿನಿಯರ್ ಆಗಿದ್ದ ಕ್ಯಾಪ್ಟನ್ ನಿಕೋಲನಸ್ ಡಾಸ್ ಎಂದು ಅವರು ಹೇಳಿದರು.

1911ರಲ್ಲಿ ಮುಖ್ಯ ಇಂಜಿನಿಯರ್ ಆಗಿದ್ದ ವಿಶ್ವೇಶ್ವರಯ್ಯ ದಿವಾನರಾಗಿ ನೇಮಕವಾದರು. ಹೀಗಾಗಿ ಕೆಆರ್​ಎಸ್ ಗಾಗಿ ಅವರು ಸೇವೆ ಸಲ್ಲಿಸಿದ್ದು ಕೇವಲ ಒಂದು ವರ್ಷ ಮಾತ್ರ. ಆನಂತರ 1911-32ರವರೆಗೆ ಕೆಆರ್​ಎಸ್ ಕಾಮಗಾರಿಯಲ್ಲಿ 7 ಜನ ಇಂಜಿನಿಯರ್ ಗಳು ಕೆಲಸ ಮಾಡಿದ್ದಾರೆ ಎಂದು ಅವರು ಕೆಆರ್​ಎಸ್ ನಿರ್ಮಾಣದ ಮಾಹಿತಿ ನೀಡಿದರು.

ಈ ನಡುವೆ 1918ರಂದು ವಿಶ್ವೇಶ್ವರಯ್ಯ ಅವರು ದಿವಾನ ಹುದ್ದೆಗೆ ರಾಜೀನಾಮೆ ನೀಡಿದರು. ಆನಂತರ ಎಂ.ಕಾಂತರಾಜ ಅರಸ್, ಎ.ಆರ್.ಬ್ಯಾನರ್ಜಿ, ಸರ್.ಮಿರ್ಜಾ ಇಸ್ಮಾಯಿಲ್ ದಿವಾನರಾಗಿದ್ದರು. ಕೆಆರ್​ಎಸ್ ಕಾಮಗಾರಿ ಆರಂಭದಲ್ಲಿ ಆನಂದರಾವ್ ದಿವಾನರಾಗಿದ್ದರು. ವಸ್ತುಸ್ಥಿತಿ ಹೀಗಿರುವಾಗ ಕೇವಲ ವಿಶ್ವೇಶ್ವರಯ್ಯ ಅವರಿಗೆ ಮಾತ್ರ ಮಾನ್ಯತೆ ಕೊಡುತ್ತಿರುವುದು ಏಕೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಒಂದು ವೇಳೆ ದಿವಾನರ ಕೊಡುಗೆಯನ್ನೂ ಸ್ಮರಿಸಬೇಕೆಂಬ ಉದ್ದೇಶ ಸರಕಾರಕ್ಕಿದ್ದರೆ, ವಿಶ್ವೇಶ್ವರಯ್ಯ ಅವರಂತೆ ಕೆಆರ್​ಎಸ್ ಗಾಗಿ ದುಡಿದ 5 ಜನ ದಿವಾನರ ಪ್ರತಿಮೆಗಳನ್ನು ನಾಲ್ವಡಿ ಅವರ ಪ್ರತಿಮೆ ಕೆಳಗಡೆ ನಿರ್ಮಿಸಬೇಕು. ಹಾಗೆಯೇ ಕೋಟ್ಯಂತರ ರೂ. ಮೌಲ್ಯದ ಒಡವೆ ಮಾರಿ ಹಣ ನೀಡಿದ ನಾಲ್ವಡಿ ಅವರ ತಾಯಿ ವಾಣಿವಿಲಾಸ ಸನ್ನಿಧಾನ ಅವರ ಪ್ರತಿಮೆಯನ್ನೂ ನಾಲ್ವಡಿಯವರ ಪಕ್ಕದಲ್ಲಿ ನಿರ್ಮಿಸಬೇಕು ಎಂದು ಅವರು ಒತ್ತಾಯಿಸಿದರು.

ಮೈಸೂರಿನ ಮಾಜಿ ಮೇಯರ್ ಪುರುಷೋತ್ತಮ, ಮಾಜಿ ಶಾಸಕ ಪುಟ್ಟಸಿದ್ದಶೆಟ್ಟಿ, ಪ್ರೊ.ಬಿ.ಜಯಪ್ರಕಾಶಗೌಡ, ಪ್ರೊ.ಹುಲ್ಕೆರೆ ಮಹದೇವ, ಎಂ.ಬಿ.ಶ್ರೀನಿವಾಸ್, ಶಿವಕುಮಾರ್ ಸೇರಿದಂತೆ ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಪ್ರಗತಿಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ಕೆಆರ್​ಎಸ್ ಜಲಾಶಯ ನಿರ್ಮಾಣಕ್ಕೆ ನಿರ್ಧಾರ ಮಾಡಿ ಅದಕ್ಕೆ ಹಣ ಒದಗಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೇ ಜಲಾಶಯ ನಿರ್ಮಾಣದ ಮುಖ್ಯ ರೂವಾರಿ. ಅವರ ಕೈಕೆಳಗೆ ಸಂಬಳ ತೆಗೆದುಕೊಂಡು ಕೆಲಸ ಮಾಡಿದ ವಿಶ್ವೇಶ್ವರಯ್ಯ ಅವರ ಪ್ರತಿಮೆ ನಿರ್ಮಿಸುವುದು ಸರಿಯೆ? ವಿಧಾನಸೌಧ ಕಟ್ಟಿಸಿದವರು ಕೆಂಗಲ್ ಹನುಮಂತಯ್ಯ ಎಂದು ಹೇಳುತ್ತೇವೆಯೇ ವಿನಃ ಅವರ ಅಧೀನದಲ್ಲಿ ಮುಖ್ಯ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದವರ ಹೆಸರು ಹೇಳುವುದಿಲ್ಲ.
- ಪ್ರೊ.ಪಿ.ವಿ.ನಂಜರಾಜೇ ಅರಸ್, ಇತಿಹಾಸ ತಜ್ಞರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News