ಎಸೆಸೆಲ್ಸಿ ಪರೀಕ್ಷೆ, ಆನ್‍ಲೈನ್ ಶಿಕ್ಷಣ ರದ್ದುಪಡಿಸಲು ಒತ್ತಾಯ: ವಾಟಾಳ್ ನಾಗರಾಜ್ ಪ್ರತಿಭಟನೆ

Update: 2020-06-13 17:31 GMT

ಹುಬ್ಬಳ್ಳಿ, ಜೂ 13: ರಾಜ್ಯದಲ್ಲಿ ಕೊರೋನ ತಾಂಡವವಾಡುತ್ತಿದ್ದು, ಎಸೆಸೆಲ್ಸಿ ಪರೀಕ್ಷೆ ಹಾಗೂ ಆನ್‍ಲೈನ್ ಶಿಕ್ಷಣವನ್ನು ರಾಜ್ಯ ಸರಕಾರ ರದ್ದುಪಡಿಸಬೇಕೆಂದು ಆಗ್ರಹಿಸಿ ವಾಟಾಳ್ ನಾಗರಾಜ್ ಅವರು ನಗರದ ಚೆನ್ನಮ್ಮ ವೃತದಲ್ಲಿಂದು ಪ್ರತಿಭಟನೆ ನಡೆಸಿದರು.

ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಅವರು ನಗರದ ಚೆನ್ನಮ್ಮ ವೃತ್ತದಲ್ಲಿಂದು ಜಾಗಟೆ ಬಾರಿಸುವ ಮೂಲಕ 'ಪರೀಕ್ಷೆ ಇಲ್ಲದೆ ಪಾಸ್ ಮಾಡಿ' ಎಂಬ ಘೋಷಣೆಯೊಂದಿಗೆ ರಾಜ್ಯ ಸರಕಾರದ ವಿರುದ್ಧ ಪ್ರತಿಭಟಿಸಿದರು.

ಪರೀಕ್ಷೆ ಮಾಡಬೇಕೋ ಅಥವಾ ಬೇಡವೋ ಎಂಬುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಸರಕಾರ ಪರೀಕ್ಷೆ ಮಾಡುತ್ತೇವೆ ಎಂದು ಹೇಳುತ್ತಿದೆ. ತೆಲಂಗಾಣ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಪರೀಕ್ಷೆಗಳನ್ನು ರದ್ದು ಮಾಡಿ ಎಸೆಸೆಲ್ಸಿ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಲಾಗಿದೆ ಎಂದರು.

ರಾಜ್ಯದಲ್ಲಿ ಒಂಬತ್ತುವರೆ ಲಕ್ಷ ಎಸೆಸೆಲ್ಸಿ ಮಕ್ಕಳಿದ್ದಾರೆ, 2 ಲಕ್ಷ ಉಪಾಧ್ಯಾಯರಿದ್ದಾರೆ, ಕಾಲೇಜು-ಶಾಲೆಯ ಸೇವಕರು 1 ಲಕ್ಷ ಜನರಿದ್ದಾರೆ. 15 ಲಕ್ಷ ಪೋಷಕರಿದ್ದಾರೆ. ಈ ಎಲ್ಲರನ್ನು ಕೊರೋನದಿಂದ ರಕ್ಷಿಸಲು ಸರಕಾರ ಏನು ವ್ಯವಸ್ಥೆ ಮಾಡಿದೆ. ಮೊದಲು ಪ್ರಾಣ ಮುಖ್ಯ ಇದರ ಬಗ್ಗೆ ಸರಕಾರ ಪ್ರಾಮಾಣಿಕವಾಗಿ ಚಿಂತನೆ ಮಾಡಬೇಕು ಎಂದರು.

ಶಿಕ್ಷಣ ಸಚಿವ ಸುರೇಶ ಕುಮಾರ್ ಅವರು ಹಠಕ್ಕೆ ಬಿದ್ದು ಎಸೆಸೆಲ್ಸಿ ಪರೀಕ್ಷೆ ಮಾಡಲು ಹೊರಟಿದ್ದಾರೆ. ರಾಜ್ಯದಲ್ಲಿ ಕೊರೋನ ಪ್ರಕರಣಗಳು ಕಡಿಮೆ ಇದ್ದ ಸಂದರ್ಭದಲ್ಲಿ ಲಾಕ್‍ಡೌನ್ ನಿರ್ಬಂಧ ವಿಧಿಸಲಾಗಿತ್ತು. ಆದರೆ ಈಗ ರಾಜ್ಯದಲ್ಲಿ ಕೊರೋನ ಅಟ್ಟಹಾಸ ಮೆರೆಯುತ್ತಿದ್ದು, ಈ ಸಂದರ್ಭದಲ್ಲಿ ಯಾವುದೇ ನಿರ್ಬಂಧವನ್ನು ವಿಧಿಸದೆ ಸಂಪೂರ್ಣ ಮುಕ್ತಗೊಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕವನ್ನು ಅಮೆರಿಕಾ ಮಾಡಲು ಆಗುವುದಿಲ್ಲ. ರಾಜ್ಯದಲ್ಲಿ ಎಸೆಸೆಲ್ಸಿ ಪರೀಕ್ಷೆ ನಡೆಸದೆ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಬೇಕು. ಅಲ್ಲದೆ ಪ್ರಾಥಮಿಕ ಹಂತದಿಂದ ಪದವಿ ಶಿಕ್ಷಣದವರೆಗೂ ಆನ್‍ಲೈನ್ ಶಿಕ್ಷಣ ಮಾಡುವುದು ಬೇಡ. ರಾಜ್ಯದಲ್ಲಿ ಕೊರೋನ ವೈರಸ್ ಲಾಕ್‍ಡೌನ್ ಸಂದರ್ಭದಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮಾಡಿಲ್ಲ. ಹೀಗಾಗಿ ಇಂತಹ ಸಂದರ್ಭದಲ್ಲಿ ಪರೀಕ್ಷೆಗಳನ್ನು ನಡೆಸುವುದು ಸರಿಯಾದ ನಿರ್ಧಾರವಲ್ಲ ಎಂದು ವಾಟಾಳ್ ನಾಗರಾಜ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News