ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ರೈತರಿಗೆ ಮರಣ ಶಾಸನ: ಕುರುಬೂರು ಶಾಂತಕುಮರ್

Update: 2020-06-13 17:33 GMT

ಬೆಂಗಳೂರು, ಜೂ. 13: ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮೂಲಕ ರಾಜ್ಯ ಸರಕಾರ ಶ್ರೀಮಂತ ಉದ್ಯಮಿಗಳು, ಕಾರ್ಪೋರೇಟ್ ಸಂಸ್ಥೆಗಳ ಹಿತರಕ್ಷಣೆಗೆ ಕಾನೂನು ರೂಪಿಸಲು ಮುಂದಾಗಿರುವುದು ರೈತದ್ರೋಹಿ ಕೃತ್ಯವಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ರೋಶ ಹೊರಹಾಕಿದ್ದಾರೆ.

ಭೂ ಸುಧಾರಣಾ ಕಾಯ್ದೆ 79 ಎ, ಮತ್ತು 79 ಬಿ ತಿದ್ದುಪಡಿ ಮಾಡಿ ಯಾರೂ ಬೇಕಾದರೂ ಕೃಷಿ ಭೂಮಿ ಖರೀದಿಸಬಹುದು ಎಂದರೆ ಇದು ರೈತರ ಬದುಕಿಗೆ ಮರಣ ಶಾಸನವಾಗಲಿದೆ. ವಿಪಕ್ಷದಲ್ಲಿದ್ದ ವೇಳೆ ಯಡಿಯೂರಪ್ಪ ತಿದ್ದುಪಡಿಗೆ ವಿರೋಧಿಸಿ, ಇದೀಗ ಆಡಳಿತಾವಧಿಯಲ್ಲಿ ತಾವೇ ಕಾಯ್ದೆ ತಿದ್ದುಪಡಿಗೆ ಮುಂದಾಗಿರುವ ರೈತ ವಿರೋಧಿ ಕೆಲಸ. ಇದನ್ನು ರೈತರ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಬೆಂಗಳೂರು, ಮೈಸೂರು ಸೇರಿದಂತೆ ದೊಡ್ಡ-ದೊಡ್ಡ ನಗರ ಪ್ರದೇಶದ ಸುತ್ತಮುತ್ತಲಿನ 20ಲಕ್ಷ ಹೆಕ್ಟೇರ್ ಗೂ ಹೆಚ್ಚು ಕೃಷಿ ಭೂಮಿ ಪಾಳು ಬಿದ್ದಿದೆ. ಇದರಿಂದ ಕೃಷಿ ಉತ್ಪಾದನೆ ಕುಂಠಿತವಾಗಿದೆ. ಹೊಸ ಕಾಯ್ದೆ ಜಾರಿಯಾದರೆ ಸಣ್ಣ ಸಣ್ಣ ರೈತರು ಹಣದಾಸೆಗೆ ಜಮೀನು ಮಾರಾಟ ಮಾಡಿ ನಗರಗಳಲ್ಲಿ ಕೂಲಿ ಕೆಲಸಕ್ಕೆ ಹೋಗುವಂತಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಕೃಷಿ ಭೂಮಿ ಬೇಕಾಬಿಟ್ಟಿ ಖರೀದಿಗೆ ಅವಕಾಶ ನೀಡಿದರೆ ಕಾರ್ಪೋರೇಟ್ ಕೃಷಿ ಉದ್ಯಮ, ರಿಯಲ್ ಎಸ್ಟೇಟ್ ಉದ್ದಿಮೆ ನಿರಾತಂಕವಾಗಿ ಮುಂದುವರಿಯುತ್ತದೆ. ರಾಜ್ಯ ಸರಕಾರ ರೈತರನ್ನು ಈ ತಂತ್ರಗಾರಿಕೆ ವಿರುದ್ಧ ಹೋರಾಟ ಅನಿವಾರ್ಯ. ಆದುದರಿಂದ ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಈ ಕಾಯ್ದೆಗೆ ತಿದ್ದುಪಡಿ ತರಬಾರದು ಎಂದು ಕುರುಬೂರು ಶಾಂತಕುಮಾರ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News