ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗೆ ಕಾಸಿಯಾ ಬೆಂಬಲ

Update: 2020-06-13 17:36 GMT

ಬೆಂಗಳೂರು ಜೂ.13: ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕೃಷಿಕರೇತರರೂ ಮಿತಿಯಿಲ್ಲದೇ ಭೂಮಿ ಖರೀದಿಗೆ ಅವಕಾಶ ಮಾಡಿಕೊಡುವ ಸಲುವಾಗಿ ರಾಜ್ಯ ಸರಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವುದು ಕೈಗಾರೀಕರಣಕ್ಕೆ ಒಂದು ಮಹತ್ತರ ಹೆಜ್ಜೆಯಾಗಿದೆ ಎಂದು ಕಾಸಿಯಾ ಈ ತಿದ್ದುಪಡಿಯನ್ನು ಸ್ವಾಗತಿಸಿದೆ.

ತಿದ್ದುಪಡಿಯಿಂದ ರಾಜ್ಯದ ಬಹತೇಕ ಉದ್ಯಮಿಗಳು ಸುಲಭವಾಗಿ ಕೃಷಿ ಭೂಮಿ ಖರೀದಿಸಬಹುದಾಗಿದೆ. ಕೈಗಾರೀಕರಣದಿಂದ ರಾಜ್ಯದ ಆದಾಯ ಹೆಚ್ಚುವುದಲ್ಲದೇ, ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗಿ, ರೈತಾಪಿ ಬಂಧುಗಳಿಗೆ ಸಹ ಒಳ್ಳೆಯ ಬೆಲೆ ಸಿಗಲಿದೆ. ಇದರಿಂದಾಗಿ ರಾಜ್ಯಕ್ಕೆ ಬಂಡವಾಳ ಹರಿದುಬರುವುದಲ್ಲದೇ, ಕೈಗಾರಿಕೆ ಮತ್ತು ಕೃಷಿ ಪ್ರಮಾಣವೂ ಹೆಚ್ಚಾಗಲಿದೆ ಎಂದು ಕಾಸಿಯ ಅಧ್ಯಕ್ಷ ಆರ್.ರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯವು ಅಭಿವೃದ್ಧಿಯತ್ತ ಸಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ದೇಶದ ಬಹುತೇಕ ರಾಜ್ಯಗಳಲ್ಲಿ ಕೃಷಿಯೇತರರು ಕೃಷಿ ಭೂಮಿಗಳನ್ನು ಖರೀದಿಸಲು ಅವಕಾಶ ನೀಡಿರುವುದರಿಂದ ರಾಜ್ಯದ ಬಹಳಷ್ಟು ಉದ್ದಿಮೆದಾರರು ಅಕ್ಕ ಪಕ್ಕದ ರಾಜ್ಯಗಳಲ್ಲಿ ಭೂಮಿ ಖರೀದಿಸುತ್ತಿದ್ದರು. ಈಗ ಆ ಚಿತ್ರಣ ಬದಲಾಗಿ ರಾಜ್ಯದಲ್ಲಿ ಬಂಡವಾಳ ಹೂಡಲು ಅನೇಕ ಉದ್ಯೋಗಸ್ಥರು ಮತ್ತು ಉದ್ದಿಮೆದಾರರು ಮುಂದೆ ಬರಲಿದ್ದಾರೆ ಎಂದು ಹೇಳಿದ್ದಾರೆ.

ಕೃಷಿ ಭೂಮಿಯನ್ನು ಕೈಗಾರಿಕಾ ಉಪಯೋಗಕ್ಕೆ ಪರಿವರ್ತಿಸುವಲ್ಲಿ ಅಧಿಕಾರಿಗಳ ಮನೋಭಾವದಿಂದ ಪರಿವರ್ತನೆ ಪಡೆಯಲು ಅನಗತ್ಯ ವಿಳಂಬವಾಗುತ್ತಿದ್ದು ಉದ್ದಿಮೆದಾರರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಆದುದರಿಂದ ಭೂ ಪರಿವರ್ತನೆ ಕಾರ್ಯವಿಧಾನವನ್ನು  ಸರಳೀಕರಣಗೊಳಿಸುವ ಅಗತ್ಯತೆ ಇದೆ ಎಂದು ಅವರು ಸರಕಾರಕ್ಕೆ ಮನವಿ ಮಾಡಿದ್ದಾರೆ.

ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೈಗಾರಿಕಾ ಜಮೀನುಗಳಲ್ಲಿರುವ ಬಿ ಖರಾಬ್ ಜಾಗಗಳಲ್ಲಿ ನಿರ್ಮಿಸಿರುವ ಕಟ್ಟಡಗಳ ಸಮೀಕ್ಷೆ ನಡಸಲು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳು ಆದೇಶಿಸಿದ್ದು, ಕಂದಾಯ ಇಲಾಖೆಯ ಹಾಗೂ ಭೂಮಾಪನ ಇಲಾಖೆಯ ಅಧಿಕಾರಿಗಳು ಪರಿವರ್ತಿತ ಜಮೀನುಗಳಲ್ಲಿ ನಿರ್ಮಿಸಿರುವ ಕೈಗಾರಿಕಾ ಕಟ್ಟಡಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿದ್ದಾರೆ ಮತ್ತು ಬಿ ಖರಾಬ್ ಜಮೀನುಗಳ ಮೇಲೆ ನಿರ್ಮಿಸಿರುವ ಕೈಗಾರಿಕಾ ಕಟ್ಟಡಗಳನ್ನು ಕೆಡವಲು ಕ್ರಮ ಜರುಗಿಸುವುದಾಗಿ ಹೆದರಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದರಿಂದಾಗಿ ಬಹುತೇಕ ಸಣ್ಣ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿವೆ. ಹತ್ತು ಹಲವು ರಾಷ್ಟ್ರಗಳಿಂದ ಸಾಕಷ್ಟು ಬಂಡವಾಳ ಹೂಡಿ ಸ್ಥಾಪಿಸಿದ ಕೈಗಾರಿಕೆಗಳನ್ನು ನಡೆಸುತ್ತಿರುವ ಸಾವಿರಾರು ಕೈಗಾರಿಕೆಗಳು ತಮ್ಮ ಕೈಗಾರಿಕೆಗಳನ್ನು ಮುಚ್ಚುವ ಮತ್ತು ಅಸ್ತಿತ್ವವನ್ನು ಕಳೆದುಕೊಳ್ಳುವ ಭೀತಿಯಿಂದ ಭಯಭೀತರಾಗಿದ್ದಾರೆ ಮತ್ತು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News