ವಿಧಾನಪರಿಷತ್ ಚುನಾವಣೆ: ಕಾಂಗ್ರೆಸ್ ಪಾಳಯದಲ್ಲಿ ಅಭ್ಯರ್ಥಿ ಆಯ್ಕೆ ಕಗ್ಗಂಟು

Update: 2020-06-14 14:07 GMT

ಬೆಂಗಳೂರು, ಜೂ.14: ಕಾಂಗ್ರೆಸ್ ಪಕ್ಷವು ವಿಧಾನಪರಿಷತ್ತಿನಲ್ಲಿ 38 ಸದಸ್ಯರನ್ನು ಹೊಂದಿದ್ದು (ಸಭಾಪತಿ ಕೆ.ಪ್ರತಾಪ್‍ ಚಂದ್ರ ಶೆಟ್ಟಿ ಸೇರಿದಂತೆ), ಜೂ.23ರಂದು ಐದು ಮಂದಿ ನಾಮನಿರ್ದೇಶಿತ ಸದಸ್ಯರು, ಜೂ.30ರಂದು ವಿಧಾನಸಭೆಯಿಂದ ಚುನಾಯಿತರಾದ 5, ಶಿಕ್ಷಕರ ಕ್ಷೇತ್ರದ ಒಬ್ಬ ಸದಸ್ಯರು ಸೇರಿ ಒಟ್ಟು 11 ಮಂದಿ ಸದಸ್ಯರ ಅವಧಿ ಪೂರ್ಣಗೊಳ್ಳಲಿದೆ.

ವಿಧಾನಸಭೆಯಿಂದ ವಿಧಾನಪರಿಷತ್ತಿನ 7 ಸ್ಥಾನಗಳಿಗೆ ಜೂ.29ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ವಿಧಾನಸಭೆಯಲ್ಲಿ ಹೊಂದಿರುವ 68 ಸದಸ್ಯರ ಸಂಖ್ಯಾಬಲದ ಆಧಾರದಲ್ಲಿ ಕೇವಲ ಇಬ್ಬರು ಸದಸ್ಯರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಕಗ್ಗಂಟಾಗಿ ಪರಿಣಮಿಸಿದೆ. ಇದೇ ವೇಳೆ ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ಪ್ರಾದೇಶಿಕ ಪ್ರಾತಿನಿಧ್ಯವನ್ನು ಪರಿಗಣಿಸುವಂತೆ ಪಕ್ಷದ ನಾಯಕರ ಮೇಲೆ ಒತ್ತಡ ಹೆಚ್ಚಾಗುತ್ತಿದೆ.

ಇದೀಗ ಕಾಂಗ್ರೆಸ್ ಪಕ್ಷ ವಿಧಾನಪರಿಷತ್ತಿನಲ್ಲಿ ಹೊಂದಿರುವ 27 ಸದಸ್ಯರಲ್ಲಿ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಎಂ.ನಾರಾಯಣಸ್ವಾಮಿ, ಕೆ.ಗೋವಿಂದರಾಜ್, ಯು.ಬಿ.ವೆಂಕಟೇಶ್, ರಾಮನಗರ ಜಿಲ್ಲೆಯನ್ನು ಸಿ.ಎಂ.ಲಿಂಗಪ್ಪ, ಎಸ್.ರವಿ, ಮೈಸೂರು-ಚಾಮರಾಜನಗರ ಜಿಲ್ಲೆಯನ್ನು ಧರ್ಮಸೇನಾ, ಕೊಡಗು ಜಿಲ್ಲೆಯನ್ನು ವೀಣಾ ಅಚ್ಚಯ್ಯ, ದ.ಕ ಜಿಲ್ಲೆಯನ್ನು ಹರೀಶ್ ಕುಮಾರ್, ಉಡುಪಿ ಜಿಲ್ಲೆಯನ್ನು ಕೆ.ಪ್ರತಾಪ್‍ ಚಂದ್ರ ಶೆಟ್ಟಿ ಪ್ರತಿನಿಧಿಸುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯನ್ನು ಪ್ರಸನ್ನ ಕುಮಾರ್, ಸಿ.ಎಂ.ಇಬ್ರಾಹಿಮ್, ಧಾರವಾಡ ಜಿಲ್ಲೆಯನ್ನು ಶ್ರೀನಿವಾಸ್ ಮಾನೆ, ಬಿಜಾಪುರ(ವಿಜಯಪುರ) ಜಿಲ್ಲೆಯನ್ನು ಸುನೀಲ್ ಪಾಟೀಲ್, ಪ್ರಕಾಶ್ ರಾಥೋಡ್, ಬಾಗಲಕೋಟೆ ಜಿಲ್ಲೆಯನ್ನು ಆರ್.ಬಿ.ತಿಮ್ಮಾಪುರ್, ಎಸ್.ಆರ್.ಪಾಟೀಲ್, ಬೀದರ್ ಜಿಲ್ಲೆಯನ್ನು ವಿಜಯ್‍ಸಿಂಗ್, ಡಾ.ಚಂದ್ರಶೇಖರ್ ಪಾಟೀಲ್, ಅರವಿಂದ ಕುಮಾರ್ ಅರಳಿ ಪ್ರತಿನಿಧಿಸುತ್ತಿದ್ದಾರೆ.

ರಾಯಚೂರು ಜಿಲ್ಲೆಯನ್ನು ಬಸವರಾಜ ಪಾಟೀಲ್ ಇಟಗಿ, ಬಳ್ಳಾರಿ ಜಿಲ್ಲೆಯನ್ನು ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ದಾವಣಗೆರೆ ಜಿಲ್ಲೆಯನ್ನು ಮೋಹನ್ ಕೊಂಡಜ್ಜಿ, ಚಿತ್ರದುರ್ಗ ಜಿಲ್ಲೆಯನ್ನು ರಘು ಆಚಾರ್, ಉತ್ತರ ಕನ್ನಡ ಜಿಲ್ಲೆಯನ್ನು ಘೋಟ್ನೇಕರ ಶ್ರೀಕಾಂತ್ ಲಕ್ಷ್ಮಣ್ ಪ್ರತಿನಿಧಿಸುತ್ತಿದ್ದಾರೆ.

ಆದರೆ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಗದಗ, ಯಾದಗಿರಿ, ಗುಲ್ಬರ್ಗ ಜಿಲ್ಲೆಗಳಿಗೆ ಕಾಂಗ್ರೆಸ್ ಪಕ್ಷದಿಂದ ವಿಧಾನಪರಿಷತ್ತಿನಲ್ಲಿ ಪ್ರಾತಿನಿಧ್ಯವಿಲ್ಲ ಎಂಬ ಕೂಗು ಎದ್ದಿದೆ. ಆದುದರಿಂದ, ಪ್ರಾತಿನಿಧ್ಯ ಇಲ್ಲದೆ ಇರುವಂತಹ ಜಿಲ್ಲೆಗಳ ಆಕಾಂಕ್ಷಿಗಳನ್ನು ಪರಿಗಣಿಸಬೇಕು ಎಂಬ ಒತ್ತಡ ಹೆಚ್ಚಾಗುತ್ತಿದೆ.

27 ಕಾಂಗ್ರೆಸ್ ಸದಸ್ಯರ ಪೈಕಿ 11 ಮಂದಿ ಉತ್ತರ ಕರ್ನಾಟಕದವರು, 13 ಮಂದಿ ಹಳೆ ಮೈಸೂರು ಭಾಗದವರು, ಮೂರು ಮಂದಿ ಕರಾವಳಿ ಭಾಗದವರು. ರಾಜ್ಯಸಭಾ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ, ಡಾ.ಸೈಯ್ಯದ್ ನಾಸೀರ್ ಹುಸೇನ್ ಉತ್ತರ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದರೆ, ಆಸ್ಕರ್ ಫರ್ನಾಂಡೀಸ್ ಕರಾವಳಿ ಭಾಗದ ಪ್ರತಿನಿಧಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್, ರಾಜ್ಯಸಭಾ ಸದಸ್ಯರಾದ ಡಾ.ಎಲ್.ಹನುಮಂತಯ್ಯ, ಜಿ.ಸಿ.ಚಂದ್ರಶೇಖರ್ ಹಳೆ ಮೈಸೂರು ಭಾಗವನ್ನು ಪ್ರತಿನಿಧಿಸುತ್ತಿದ್ದಾರೆ.

27 ಮಂದಿ ಸದಸ್ಯರ ಪೈಕಿ ಎಸ್ಸಿ-4, ಹಿಂದುಳಿದ ವರ್ಗದವರು-8, ಲಿಂಗಾಯತ-7, ಒಕ್ಕಲಿಗ-6, ಓರ್ವ ಬ್ರಾಹ್ಮಣ, ಓರ್ವ ಮುಸ್ಲಿಮ್ ಸದಸ್ಯರಿದ್ದಾರೆ. ನಿವೃತ್ತರಾಗುತ್ತಿರುವವರ ಪೈಕಿ ನಾಲ್ವರು ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯದ (ರಿಝ್ವಾನ್ ಅರ್ಶದ್ ಉಪ ಚುನಾವಣೆಯಲ್ಲಿ ವಿಧಾನಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ತೆರವಾದ ಸ್ಥಾನ ಸೇರಿ), ಓರ್ವ ಕ್ರೈಸ್ತ, ಹಿಂದುಳಿದ ವರ್ಗದ 6 ಮಂದಿ ಸದಸ್ಯರು ಇದ್ದಾರೆ.

ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದ ನಸೀರ್ ಅಹ್ಮದ್, ಎಂ.ಸಿ.ವೇಣುಗೋಪಾಲ್, ಜಯಮ್ಮ, ಎಚ್.ಎಂ.ರೇವಣ್ಣ, ಎನ್.ಎಸ್.ಬೋಸರಾಜ ಜೂ.30ರಂದು ನಿವೃತ್ತರಾಗುತ್ತಿದ್ದಾರೆ. ಶಿಕ್ಷಕರ ಕ್ಷೇತ್ರದಿಂದ ಶರಣಪ್ಪ ಮಟ್ಟೂರ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದಾರೆ. ರಾಜ್ಯಪಾಲರ ಮೂಲಕ ನಾಮನಿರ್ದೇಶನಗೊಂಡಿದ್ದ ತಿಪ್ಪಣ್ಣ ಕೆಮಕೆನೊರ್, ಕೆ.ಅಬ್ದುಲ್ ಜಬ್ಬಾರ್, ಡಾ.ಜಯಮಾಲ ರಾಮಚಂದ್ರ, ಐವನ್ ಡಿ’ಸೋಜಾ ಹಾಗೂ ಇಕ್ಬಾಲ್ ಅಹ್ಮದ್ ಸರಡಗಿ ಜೂ.23ರಂದು ತಮ್ಮ ಅವಧಿ ಪೂರ್ಣಗೊಳಿಸಲಿದ್ದಾರೆ.

Writer - -ಅಮ್ಜದ್‍ ಖಾನ್ ಎಂ.

contributor

Editor - -ಅಮ್ಜದ್‍ ಖಾನ್ ಎಂ.

contributor

Similar News