ಮಂಡ್ಯ: ತಾಯಿ-ಇಬ್ಬರು ಮಕ್ಕಳು, ಎಸೆಸೆಲ್ಸಿ ವಿದ್ಯಾರ್ಥಿ ಸೇರಿ 7 ಮಂದಿ ನೀರಿನಲ್ಲಿ ಮುಳುಗಿ ಮೃತ್ಯು

Update: 2020-06-14 16:58 GMT

ಮಂಡ್ಯ, ಜೂ.14: ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ಏಳು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. 

ನಾಗಮಂಗಲ ತಾಲೂಕಿನ ಬೀರನಹಳ್ಳಿಯಲ್ಲಿ ಕೆರೆ ನೀರಿಗೆ ಬಿದ್ದು ಮೂವರು, ಚೋಳಸಂದ್ರ ಗ್ರಾಮದಲ್ಲಿ ಇಬ್ಬರು ಮತ್ತು ಕೆ.ಆರ್.ಪೇಟೆ ತಾಲೂಕಿನ ಗಂಗನಹಳ್ಳಿ ಗ್ರಾಮದಲ್ಲಿ ಜಾನುವಾರುಗಳ ಮೈ ತೊಳೆಯಲು ಹೋಗಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ರವಿವಾರ ನಡೆದಿದೆ.

ಬೀರನಹಳ್ಳಿ ವರದಿ

ಬಟ್ಟೆ ತೊಳೆಯಲು ಹೋಗಿ ಆಕಸ್ಮಿಕವಾಗಿ ಕೆರೆ ನೀರಿಗೆ ಬಿದ್ದು ತಾಯಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಬೀರನಹಳ್ಳಿ ಗ್ರಾಮದಲ್ಲಿ ನಡೆದಿದೆ,

ನಾಗಮಂಗಲ ತಾಲೂಕಿನ ಬೋಗಾದಿ ಗ್ರಾಮ ಪಂಚಾಯತ್ ನ ಬೀರನಹಳ್ಳಿ ಗ್ರಾಮದ ಗೀತಾ ನರಸಿಂಹಯ್ಯ (38) ಮತ್ತು ಮಕ್ಕಳಾದ ಸವಿತ(19), ಸೌಮ್ಯ(14) ಮೃತರು.

ಬೆಳಗ್ಗೆ ಗೀತಾ ಅವರು ತನ್ನ ಮಕ್ಕಳೊಂದಿಗೆ ಗ್ರಾಮದ ಹತ್ತಿರವಿರುವ ಸಣ್ಣಯ್ಯನ ಕಟ್ಟೆಗೆ ಬಟ್ಟೆ ತೊಳೆಯಲು ಹೋಗಿದ್ದರು. ಈ ವೇಳೆ ಮಗಳು ಕಾಲು ಜಾರಿ ಕೆರೆಗೆ ಬಿದ್ದಿದ್ದಾಳೆ ಎನ್ನಲಾಗಿದೆ. ಅವಳನ್ನು ರಕ್ಷಿಸಲು ಹೋದಾಗ ತಾಯಿ ಗೀತಾ ಮತ್ತು ಇನ್ನೊಬ್ಬಳು ಮಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ಕೆರೆಯಲ್ಲಿ ಬಿಂದಿಗೆ ತೇಲುತ್ತಿದ್ದುದನ್ನು ಗಮನಿಸಿದ ಗ್ರಾಮಸ್ಥರು ಅನುಮಾನಗೊಂಡು, ಹುಡುಕಾಡಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚೋಳ ಸಂದ್ರದಲ್ಲಿ ಇಬ್ಬರು ಸಾವು
ತಾಲೂಕಿನ ಬೆಳ್ಳೂರು ಹೋಬಳಿಯ ಚೋಳಸಂದ್ರ ಗ್ರಾಮದಲ್ಲಿ ಬಟ್ಟೆ ತೊಳೆಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿಬಿದ್ದು ಇಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.

ಗ್ರಾಮದ ಗಂಗಾಧರಯ್ಯರವರ ಪುತ್ರಿ ರಶ್ಮಿ(22) ಮತ್ತು ಮೃತ ಯುವತಿಯ ಅಕ್ಕನ ಮಗಳಾದ ಇಂಚರ(7) ಮೃತಪಟ್ಟವರು. ತಾಲೂಕಿನ ಯಲದಹಳ್ಳಿ ಗ್ರಾಮದ ಸಮೀಪವೇ ಇರುವ ಯಲಾದಳ್ಳಿ ಕೆರೆಯಲ್ಲಿ ಘಟನೆ ನಡೆದಿದೆ. ಈ ಸಂಬಂದ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಲೆಯಲ್ಲಿ ಮುಳುಗಿ ಇಬ್ಬರು ಸಾವು

ಹೇಮಾವತಿ ನಾಲೆಯಲ್ಲಿ ಜಾನುವಾರುಗಳ ಮೈ ತೊಳೆಯಲು ಹೋಗಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಕಸಬಾ ಹೋಬಳಿಯ ಹುರುಳಿ ಗಂಗನಹಳ್ಳಿ ಗ್ರಾಮದಲ್ಲಿ ರವಿವಾರ ಬೆಳಗ್ಗೆ ನಡೆದಿದೆ.

ಹುರುಳಿ ಗಂಗನಹಳ್ಳಿ ಗ್ರಾಮದ ಲೇಟ್ ಸ್ವಾಮೀಗೌಡ ಅವರ ಮಗ ಅಭಿಷೇಕ್(15) ಮತ್ತು ಆದಿಹಳ್ಳಿ ಗ್ರಾಮದ ಜವಾರೇಗೌಡ ಅವರ ಮಗ ಕುಮಾರ್(25) ಮೃತಪಟ್ಟವರು.

ಕುಮಾರ್- ಅಭಿಷೇಕ್

ಘಟನೆ ವಿವರ: ಬೆಳಗ್ಗೆ ಸುಮಾರು 10ಗಂಟೆ ಸಮಯದಲ್ಲಿ ಅಭಿಷೇಕ್ ಮತ್ತು ಕುಮಾರ್ ಅವರು ಗ್ರಾಮದ ಬಳಿ ಹರಿಯುವ ಹೇಮಾವತಿ ಕಾಲುವೆಯ ನೀರಿನಲ್ಲಿ ತಮ್ಮ ಜಾನುವಾರುಗಳನ್ನು(ಹಸುಗಳು) ತೊಳೆಯಲು ಹೋಗಿದ್ದರು. ಈ ಸಂದರ್ಭದಲ್ಲಿ ಅಭಿಷೇಕ್ ಆಕಸ್ಮಿಕವಾಗಿ ಕಾಲು ಜಾರಿ ಕಾಲುವೆಯೊಳಗೆ ಹೊಂಡದಂತಿದ್ದ ಜಾಗದಲ್ಲಿ ನೀರೊಳಗೆ ಬಿದ್ದಿದ್ದಾರೆ. ತಕ್ಷಣ ಅಭಿಷೇಕ್ ಅವರನ್ನು ರಕ್ಷಿಸಲು ಹೋದ ಕುಮಾರ್ ಅವರು ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಜಾನುವಾರುಗಳು ಈಜಿ ದಡ ಸೇರಿವೆ. 

ಕೆ.ಆರ್.ಪೇಟೆ ಪಟ್ಟಣದ ಅಗ್ನಿಶಾಮಕ ಠಾಣೆಯ ಅಧಿಕಾರಿ ಶ್ರೀನಿವಾಸರಾವ್ ನೇತೃತ್ವದ ಅಧಿಕಾರಿಗಳ ತಂಡವು ಶವಗಳನ್ನು ನೀರಿನಿಂದ ಮೇಲೆತ್ತಿ ವಾರಸುದಾರರಿಗೆ ನೀಡಿದ್ದಾರೆ. 

ಮೃತ ಅಭಿಷೇಕ್ ಕೊರಟೀಕೆರೆಯ ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿ. ಕುಮಾರ್ ಅವರು ಅಭಿಷೇಕ್ ಅವರ ಸೋದರ ಮಾವ. ಕುಮಾರ್ ಅವರು ಅಕ್ಕನ ಮನೆ ಗಂಗನಹಳ್ಳಿ ಬಂದಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ವಿದ್ಯಾರ್ಥಿ ಅಭಿಷೇಕ್ ನಿಧನಕ್ಕೆ ಶಾಲೆಯ ಮುಖ್ಯ ಶಿಕ್ಷಕ ಮಹೇಶ್ ಹಾಗೂ ಶಿಕ್ಷಕ ವೃಂದದವರು ಕಂಬನಿ ಮಿಡಿದಿದ್ದಾರೆ. ತಾಲೂಕು ಎಪಿಎಂಸಿ ಅಧ್ಯಕ್ಷ ಜೆ.ಚಂದ್ರಹಾಸ ಮತ್ತು ಉಪಾಧ್ಯಕ್ಷೆ ಮಂಜಮ್ಮ ಅವರು ಮೃತ ಅಭಿಷೇಕ್ ಮತ್ತು ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಇವರ ಕುಟುಂಬಕ್ಕೆ ರೈತ ಸಂಜೀವಿನಿ ಯೋಜನೆ ಅಡಿಯಲ್ಲಿ ಸೂಕ್ತ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಘಟನೆ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News