×
Ad

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಸೆಸೆಲ್ಸಿ ಪರೀಕ್ಷೆ ನಡೆಸಬಾರದು: ರಾಜಶ್ರೀ ಹಲಗೇಕರ್

Update: 2020-06-14 22:47 IST

ಬೆಳಗಾವಿ, ಜೂ.14: ಜೂ.25ರಿಂದ ಎಸೆಸೆಲ್ಸಿ ಪರೀಕ್ಷೆ ನಡೆಸಲು ರಾಜ್ಯ ಸರಕಾರ ಸಿದ್ಧತೆ ನಡೆಸಿರುವ ಬೆನ್ನಲ್ಲೇ ಲಕ್ಷಾಂತರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆ ನಡೆಸಬಾರದೆಂದು ಕೋರಿ ಬೆಳಗಾವಿಯ ಖಾಸಗಿ ವಿದ್ಯಾಸಂಸ್ಥೆಯ ಮುಖ್ಯಸ್ಥೆ ರಾಜಶ್ರೀ ಹಲಗೇಕರ್ ಅವರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಸದ್ಯದಲ್ಲಿಯೇ ಅರ್ಜಿ ವಿಚಾರಣೆಗೆ ಬರಲಿದೆ.

ಸುಪ್ರೀಂಕೋರ್ಟ್‍ಗೆ ಯಾಕೆ ಅರ್ಜಿ ಸಲ್ಲಿಸಿದೆ ಎಂಬುದರ ಬಗ್ಗೆ ಮಾತನಾಡಿರುವ ರಾಜಶ್ರೀ ಅವರು, ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಈಗಾಗಲೇ 3 ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಕೊರೋನ ಸೋಂಕು ತಗುಲಿದೆ. ಪರೀಕ್ಷೆ ಮೊದಲ ದಿನ ಪರೀಕ್ಷಾ ಕೇಂದ್ರವಿರುವ ಪ್ರದೇಶ ಕಂಟೈನ್ಮೆಂಟ್ ಝೋನ್ ಆದರೆ, ಪರೀಕ್ಷಾ ಕೇಂದ್ರವನ್ನು ಹೇಗೆ ಸ್ಥಳಾಂತರಿಸುತ್ತಾರೆ. ಎಸೆಸೆಲ್ಸಿ ವಿದ್ಯಾರ್ಥಿಗಳು ಥರ್ಮಲ್ ಸ್ಕ್ರೀನ್ ಟೆಸ್ಟ್ ಸೇರಿ ಒಟ್ಟು 5 ತಾಸು ಯಾರಾದರೂ ಮಾಸ್ಕ್ ಧರಿಸಿರಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ.

ಪರೀಕ್ಷಾ ಸುಪರ್ ವೈಸರ್ ವಿದ್ಯಾರ್ಥಿಗಳಿಗೆ ದೂರದಿಂದ ಪ್ರಶ್ನೆ ಪತ್ರಿಕೆ ಎಸೆಯಲು ಸಾಧ್ಯವಿಲ್ಲ. ಮಕ್ಕಳ ಬಳಿಗೆ ಹೋಗಿಯೇ ಪ್ರಶ್ನೆ ಪತ್ರಿಕೆ ಕೊಡಬೇಕಾಗುತ್ತದೆ. ಅದೇ ಸುಪರ್ ವೈಸರ್ ಆ ಕೊಠಡಿಯ ಎಲ್ಲ ವಿದ್ಯಾರ್ಥಿಗಳನ್ನೂ ಸಂಪರ್ಕಿಸುತ್ತಾನೆ. ಇದು ಬಹುದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ಶೌಚಾಲಯದಿಂದಲೂ ಸೋಂಕು ಹರಡಬಹುದು ಎಂದು ಹೇಳಿದರು.

ಎಸೆಸೆಲ್ಸಿ ಪರೀಕ್ಷೆ ನಡೆಸದಿದ್ದರೆ ನಷ್ಟವೇನೂ ಸಂಭವಿಸುವುದಿಲ್ಲ. ಪ್ರತಿ ಶಾಲೆಯಿಂದ ಈಗಾಗಲೇ ಪ್ರಿಲಿಮ್ನರಿ ಪರೀಕ್ಷೆಯ ಫಲಿತಾಂಶ ಕಳಿಸಲಾಗಿದೆ. ಅದರ ಆಧಾರದ ಮೇಲೆ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಬಹುದು. ಲಕ್ಷಾಂತರ ವಿದ್ಯಾರ್ಥಿಗಳನ್ನು ಅವರ ಪಾಲಕರನ್ನು ಆತಂಕದಲ್ಲಿ ಇರಿಸಿ ಪರೀಕ್ಷೆ ನಡೆಸುವ ಅವಶ್ಯಕತೆಯೇ ಇಲ್ಲ ಎಂದು ರಾಜಶ್ರೀ ಹಲಗೇಕರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News