ಅಭಿವೃದ್ಧಿಯ ಹೆಸರಿನಲ್ಲಿ ದೇಶವನ್ನು ಸುಡುತ್ತಿರುವ ಸೆರಗಿನ ಕೆಂಡ

Update: 2020-06-15 05:17 GMT

ನಾವು ಪರಿಸರ, ಪ್ರಾಣಿಗಳ ಕುರಿತಂತೆ ಪ್ರೀತಿಯನ್ನು ವ್ಯಕ್ತಪಡಿಸಬೇಕಾದರೆ ಅದರ ಹಿಂದೆ ‘ರಾಜಕೀಯ ಕಾರಣ’ಗಳಿರುವುದು ಅನಿವಾರ್ಯ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಪ್ರಾಮಾಣಿಕವಾಗಿ ಪರಿಸರ ಮತ್ತು ಪ್ರಾಣಿಗಳನ್ನು ಪ್ರೀತಿಸಿದರೆ, ‘ಅಭಿವೃದ್ಧಿ ವಿರೋಧಿಗಳು’ ಎಂಬ ಮುಳ್ಳಿನ ಕಿರೀಟ ಧರಿಸಿಕೊಳ್ಳಬೇಕಾಗುತ್ತದೆ. ಇತ್ತೀಚೆಗೆ ಕೇರಳದಲ್ಲಿ ಗರ್ಭಿಣಿ ಆನೆಯೊಂದು ಪಟಾಕಿ ಹೊಂದಿದ್ದ ಅನಾನಸ್ ತಿಂದು ಭೀಕರವಾಗಿ ಸಾವನ್ನಪ್ಪಿದಾಗ ಕೇಂದ್ರ ಸರಕಾರ ತಕ್ಷಣ ಪ್ರತಿಕ್ರಿಯಿಸಿತು. ತನಿಖೆಗೆ ಆದೇಶ ನೀಡಿತು. ಮೇನಕಾಗಾಂಧಿಯಿಂದ ಹಿಡಿದು, ಬಿಜೆಪಿಯ ತಳಸ್ತರದ ಕಾರ್ಯಕರ್ತರವರೆಗೆ ಆ ದುರಂತಕ್ಕಾಗಿ ಕಣ್ಣೀರು ಸುರಿಸಿದರು. ಈ ದೇಶದಲ್ಲಿ ವಲಸೆ ಕಾರ್ಮಿಕರು ಹಸಿವಿನಿಂದ ಹೆದ್ದಾರಿಯ ಮಧ್ಯೆ ಸತ್ತಾಗಲೂ ಹೀಗೆ ಯಾರೂ ಮರುಗಿರಲಿಲ್ಲ. ಹಾಗೆಂದು, ಆನೆಯೊಂದರ ಈ ರೀತಿಯ ಹೃದಯವಿದ್ರಾವಕ ಸಾವನ್ನು ಕಡೆಗಣಿಸಬೇಕು ಎಂದು ಅರ್ಥವಲ್ಲ. ನಮ್ಮ ಕಣ್ಣೀರು, ದುಃಖ ಪ್ರಾಮಾಣಿಕವಾಗಿದ್ದಾಗ ಮಾತ್ರ ಭವಿಷ್ಯದಲ್ಲಿ ಇಂತಹ ಅವಘಡಗಳನ್ನು ತಪ್ಪಿಸಲು ಸಾಧ್ಯ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ.

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗರ್ಭಿಣಿ ಆನೆಯ ಹತ್ಯೆಗೆ ಭಾರತಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾದ ದಿನದಂದೇ, ಅಸ್ಸಾಮಿನ ಬಾಘ್‌ಜನ್ ಸಮೀಪದ ದಿಬ್ರೂ-ಸೈಖೋವಾ ರಾಷ್ಟ್ರೀಯ ಉದ್ಯಾನವನದಲ್ಲಿ ಮೇ 27ರಿಂದ ಆಕಸ್ಮಿಕವಾಗಿ ತೈಲ ಬಾವಿಯಿಂದ ವಾತಾವರಣಕ್ಕೆ ನಿರಂತರವಾಗಿ ನೈಸರ್ಗಿಕ ಅನಿಲದ ಪ್ರವಾಹವೇ ಹರಿದು ಹೋಗುತ್ತಿತ್ತು. ಆ ಬಳಿಕ ಜೂನ್ 10ರಂದು ಹಠಾತ್ತನೆ ತೈಲ ಬಾವಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದು ಇನ್ನೂ ಉರಿಯುತ್ತಲೇ ಇದೆ. ಈ ದುರ್ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದರು ಹಾಗೂ 3 ಸಾವಿರಕ್ಕೂ ಅಧಿಕ ಮಂದಿ ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರಗೊಳಿಸಲಾಗಿತ್ತು. ಅನಿಲ ಸೋರಿಕೆಯಾಗಿ ಎರಡುವಾರವೇ ಕಳೆದಿದ್ದರೂ, ಅಲ್ಲಿಯವರೆಗೂ ಮುಖ್ಯವಾಹಿನಿಯ ಮಾಧ್ಯಮಗಳಿಗೆ ಈ ದುರಂತವು ಒಂದು ದೊಡ್ಡ ಸುದ್ದಿಯೆನಿಸಲೇ ಇಲ್ಲ. ಇಬ್ಬರು ಅಮಾಯಕ ಕಾರ್ಮಿಕರು ಆಹುತಿಯಾದ ಬಳಿಕವಷ್ಟೇ ಮಾಧ್ಯಮಗಳು ಆ ಕಡೆಗೆ ದೃಷ್ಟಿ ಹೊರಳಿಸಿತು. ಇಷ್ಟಕ್ಕೂ ವಿಶಾಖಪಟ್ಟಣದಲ್ಲಿ ನಡೆದ ವಿಷಾನಿಲ ದುರಂತಕ್ಕೆ ಮಾಧ್ಯಮಗಳಲ್ಲಿ ದೊರೆತಷ್ಟು ಅವಕಾಶ ಅಸ್ಸಾಮಿನಲ್ಲಿ ತೈಲ ಬಾವಿ ದುರಂತಕ್ಕೆ ಸಂಬಂಧಿಸಿ ಸಿಗಲಿಲ್ಲ.

ಮೇ 7ರಂದು ವಿಶಾಖಪಟ್ಟಣದ ಎಲ್‌ಜಿ ಪಾಲಿಮರ್ಸ್ ಘಟಕದಲ್ಲಿ ವಿಷಾನಿಲ ಸೋರಿಕೆಯಾಗಿ ಕನಿಷ್ಠ ಏಳು ಮಂದಿ ಮೃತಪಟ್ಟಿದ್ದರು. ಬಂದರು ನಗರವಾದ ವಿಶಾಖಪಟ್ಟಣದಲ್ಲಿ ಈ ದುರಂತ ಭಯದ ವಾತಾವರಣವನ್ನೇ ಸೃಷ್ಟಿಸಿತ್ತು. ಈ ದುರ್ಘಟನೆಯನ್ನು 1984ರ ಭೋಪಾಲ್ ಅನಿಲ ದುರಂತದ ಜೊತೆಗೂ ಮಾಧ್ಯಮಗಳು ಹೋಲಿಕೆ ಮಾಡಿದ್ದವು. ಕಳೆದ ವರ್ಷ ದಕ್ಷಿಣ ಅಮೆರಿಕದಲ್ಲಿ ಅಮೆಝಾನ್ ದಟ್ಟಾರಣ್ಯದಲ್ಲಿ ಭೀಕರ ಕಾಡ್ಗಿಚ್ಚು ಸಂಭವಿಸಿದ ಬಳಿಕ ಜಗತ್ತಿನಾದ್ಯಂತ ಜನತೆ ಪರಿಸರ ಸಂರಕ್ಷಣೆ ಬಗ್ಗೆ ಚರ್ಚಿಸತೊಡಗಿದ್ದಾರೆ. ಆದರೆ ಇದರ ಜೊತೆಗೆ ಇನ್ನೊಂದು ಅಹಿತಕರ ಸತ್ಯವೂ ಬೆಳಕಿಗೆ ಬಂದಿದೆ. ಘಟನೆ ನಡೆಯಲು ಏನು ಕಾರಣವೆಂಬ ಬಗ್ಗೆ ಚಿಂತಿಸುವ ಬದಲು ನಾವು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಛಾಯಾಚಿತ್ರಗಳು ಹಾಗೂ ವೀಡಿಯೊಗಳ ಬಗ್ಗೆ ಪ್ರತಿಕ್ರಿಯಿಸುತ್ತೇವೆ. ಕೇರಳದ ಅಥವಾ ಅಮೆಝಾನಿನ ಒಂದು ಫೋಟೊ ನಮ್ಮ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸುವುದಾದರೆ, ಅಸ್ಸಾಮಿನಲ್ಲಿ ತೈಲದುರಂತ ಸಂಭವಿಸಿದ ಸ್ಥಳದ ಸಮೀಪದಲ್ಲಿರುವ ಮಾಗುರಿ-ಮೊಟಾಪುಂಗ್ ಜೌಗುಪ್ರದೇಶದಲ್ಲಿ ಅಳಿವಿನಂಚಿನಲ್ಲಿರುವ ಗ್ಯಾಂಜೆಟಿಕ್ ಡಾಲ್ಫಿನ್ ಮೀನಿನ ಕಳೇಬರದ ಚಿತ್ರವೂ ನಮ್ಮನ್ನು ವಿಚಲಿತಗೊಳಿಸಬೇಕಿದೆ. ತೈಲ ಬಾವಿ ಸೋರಿಕೆಯು ಆ ಪ್ರದೇಶದ ಜೀವ ವೈವಿಧ್ಯತೆಯ ಮೇಲೆ ತೀವ್ರವಾದ ಪರಿಣಾಮವನ್ನುಂಟು ಮಾಡಿದೆ. ಸಮೀಪದ ಜೌಗುಪ್ರದೇಶದಲ್ಲಿ ವಾಸವಾಗಿದ್ದ ಮೀನು, ಹಾವು, ಹಕ್ಕಿ ಸೇರಿದಂತೆ ಅಸಂಖ್ಯ ಜೀವಜಂತುಗಳು ತೈಲ ಸೋರಿಕೆಯಿಂದಾಗಿ ಸಾವನ್ನಪ್ಪಿವೆ.

ಗ್ಯಾಂಜೆಟಿಕ್ ಡಾಲ್ಫಿನ್‌ನ ಕಳೇಬರವನ್ನು ಸ್ಥಳೀಯರು ಮೇ 31ರಂದು ಪತ್ತೆಹಚ್ಚಿದ್ದರು. ಇದಾದ ನಾಲ್ಕು ದಿನಗಳ ಆನಂತರ ಕೇರಳದಲ್ಲಿ ಗರ್ಭಿಣಿ ಆನೆಯೊಂದು ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡುಬಂದಿತ್ತು. ಮಾಜಿ ಕೇಂದ್ರ ಸಚಿವೆ ಹಾಗೂ ಬಿಜೆಪಿ ಸಂಸದೆ ಮೇನಕಾಗಾಂಧಿ ಆನೆಯ ಹತ್ಯೆಯನ್ನು ಖಂಡಿಸಿದ್ದರು. ಈ ದುರ್ಘಟನೆಯನ್ನು ಕೋಮುದ್ವೇಷ ಬಿತ್ತುವುದಕ್ಕೂ ಅವರು ಬಳಸಿಕೊಂಡರು. ಆದರೆ ಅಸ್ಸಾಮಿನಲ್ಲಿ ತೈಲ ಸೋರಿಕೆಯಿಂದಾಗಿ ಆ ಪ್ರದೇಶದಲ್ಲಿನ ಸಮೃದ್ಧ ಜೀವ ವೈವಿಧ್ಯತೆಯ ಮೇಲೆ ಆಗಿರುವ ಪರಿಣಾಮವು ಈ ವನ್ಯಜೀವಿ ಹೋರಾಟ ಗಾರ್ತಿಯ ಅರಿವಿಗೆ ಬರಲೇ ಇಲ್ಲ.ಈಶಾನ್ಯ ಭಾರತದ ಕೆಲವೇ ಕೆಲವು ಮಂದಿಯನ್ನು ಹೊರತುಪಡಿಸಿದರೆ ಯಾವುದೇ ಸಿಲೆಬ್ರಿಟಿ, ಹೋರಾಟಗಾರ ಅಥವಾ ಸಾರ್ವಜನಿಕ ವ್ಯಕ್ತಿ, ತೈಲ ಸೋರಿಕೆಯಿಂದ ತೈಲ ಬಾವಿಯ ಸುತ್ತಮುತ್ತಲಿನ ಪರಿಸರಕ್ಕೆ ಆಗಿರುವ ಅಪಾರ ಹಾನಿಯ ಬಗ್ಗೆ ಧ್ವನಿಯೆತ್ತಲೇ ಇಲ್ಲ.

ಇದನ್ನೆಲ್ಲಾ ಗಮನಿಸಿದಾಗ, ಈಶಾನ್ಯ ಭಾರತದ ಪ್ರಾಣಿಗಳ ಜೀವಕ್ಕೆ ಬೆಲೆಯಿಲ್ಲ ಹಾಗೂ ಅವುಗಳ ಅಳಿವುಉಳಿವು ಚಿಂತೆಯ ವಿಷಯವಲ್ಲ ಎಂಬ ಧೋರಣೆ ನಮ್ಮ ನಾಯಕರಲ್ಲಿ ಇದೆಯೇ ಎಂಬ ಪ್ರಶ್ನೆ ಮೂಡುತ್ತದೆ. ತೈಲ ಸೋರಿಕೆಯ ಬಳಿಕ ತೈಲ ಬಾವಿಯ ಮಾಲಕಸಂಸ್ಥೆ ಸರಕಾರಿ ಸ್ವಾಮ್ಯದ ಆಯಿಲ್ ಇಂಡಿಯಾ ಲಿಮಿಟೆಡ್ ತಡವಾಗಿ ಎಚ್ಚೆತ್ತುಕೊಂಡು ಸೋರಿಕೆಯನ್ನು ನಿಯಂತ್ರಿಸುವುದಕ್ಕಾಗಿ ವಿದೇಶಿ ತಜ್ಞರನ್ನು ಕರೆಸಿಕೊಂಡಿತ್ತು. ಆದರೆ ಆ ವೇಳೆಗಾಗಲೇ ಸ್ಥಳೀಯ ಜೀವವೈವಿಧ್ಯಕ್ಕೆ ಹಾಗೂ ಸ್ಥಳೀಯ ಕೃಷಿ ಭೂಮಿಗೆ ಸರಿಪಡಿಸಲಾಗದಷ್ಟು ಹಾನಿಯಾಗಿಬಿಟ್ಟಿತ್ತು. ವಿವಿಧ ಸಂಘಟನೆಗಳ ಪ್ರತಿಭಟನೆಗಳ ಹೊರತಾಗಿಯೂ, ಈ ವರ್ಷದ ಮೇನಲ್ಲಿ ದಿಬ್ರೂ- ಸೈಖೋವಾ ರಾಷ್ಟ್ರೀಯ ಉದ್ಯಾನವನದ ಏಳು ಪ್ರದೇಶಗಳಲ್ಲಿ ತೈಲ ಬಾವಿಗಳನ್ನು ಕೊರೆಯಲು ಅನುಮತಿ ನೀಡಲಾಗಿತ್ತು. ಆದರೆ ಪರಿಸರ ಸೂಕ್ಷ್ಮ ಸಂವೇದಿ ವಲಯದ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ತಾನು ಡ್ರಿಲ್ಲಿಂಗ್ ನಡೆಸುತ್ತಿಲ್ಲವೆಂದು ಕಂಪೆನಿಯು ವಾದಿಸಿತ್ತು.

ಇದಕ್ಕೂ ಕೆಲವೇ ದಿನಗಳ ಮೊದಲು ಪಾರಿಸಾರಿಕವಾಗಿ ಅತ್ಯಂತ ಸೂಕ್ಷ್ಮವಾದ ಅಸ್ಸಾಮಿನ ದೆಹಿಂಗ್ ಪಟ್ಕಾಯಿ ಆನೆ ಅಭಯಾರಣ್ಯ ಪ್ರದೇಶದಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿ (ಎನ್‌ಬಿಡಬ್ಲುಎಲ್)ಕಲ್ಲಿದ್ದಲು ಗಣಿಗಾರಿಕೆಗೆ ಅನುಮತಿ ನೀಡಿತ್ತು. ಈಶಾನ್ಯ ಭಾರತ ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಸುದ್ದಿಯಲ್ಲಿದೆ. ಈಶಾನ್ಯ ಭಾಗದಲ್ಲಿ ಹರಡಿರುವ ದಟ್ಟ ಕಾಡು ಮತ್ತು ಅದಿರು ಬೃಹತ್ ಉದ್ಯಮಿಗಳ ಕಣ್ಣು ಕುಕ್ಕಿವೆ. ಈ ಭಾಗದ ಆದಿವಾಸಿಗಳು, ಬುಡಕಟ್ಟು ಜನರ ದೆಸೆಯಿಂದಾಗಿ ಈವರೆಗೆ ಇಲ್ಲಿನ ಪರಿಸರ ಹಸಿರಾಗಿ ಕಂಗೊಳಿಸುತ್ತಿತ್ತು. ಇದೀಗ ನಕ್ಸಲ್ ಕಾರ್ಯಾಚರಣೆಯನ್ನು ಮುಂದಿಟ್ಟುಕೊಂಡು, ಬೃಹತ್ ಕಂಪೆನಿಗಳಿಗೆ ಸರಕಾರ ರಹದಾರಿಯನ್ನು ನಿರ್ಮಿಸಿಕೊಡುತ್ತಿದೆ. ಈ ಕಾರಣದಿಂದಲೇ ಈಶಾನ್ಯ ಭಾಗದಲ್ಲಿ ನಡೆಯುವ ಕೈಗಾರಿಕಾ ಅವಘಡಗಳಿಗೆ ಸರಕಾರವೇ ಪ್ರಚಾರ ದೊರಕದಂತೆ ಮಾಡುತ್ತದೆ. ಸದ್ಯಕ್ಕೆ ಈಶಾನ್ಯ ಭಾರತವನ್ನು ನಾವು ನಕ್ಸಲ್ ಕಾರ್ಯಾಚರಣೆಯ ಸಂದರ್ಭದಲ್ಲಿ ಮಾತ್ರ ನೆನಪಿಸಿಕೊಳ್ಳುತ್ತಿದ್ದೇವೆ.

ಜೂನ್ 4ರಂದು ಗುಜರಾತ್‌ನ ಕಾರ್ಖಾನೆಯೊಂದರಲ್ಲಿ ನಡೆದ ಸ್ಫೋಟದಲ್ಲಿ 10 ಮಂದಿ ಸಿಬ್ಬಂದಿ ಮೃತಪಟ್ಟಿದ್ದರು. 50ಕ್ಕೂ ಅಧಿಕ ಮಂದಿ ಕಾರ್ಮಿಕರು ಗಂಭೀರ ಗಾಯಗೊಂಡಿದ್ದರು. ಪ್ರಧಾನಿಯ ತವರಿನಲ್ಲೇ ನಡೆದ ಈ ದುರ್ಘಟನೆ ಬಹುತೇಕ ಮುಚ್ಚಿ ಹೋಯಿತು. ಅನಿಲ ಸೋರಿಕೆ, ತೈಲ ಸೋರಿಕೆಯಂತಹ ಕೈಗಾರಿಕಾ ಅವಘಡಗಳನ್ನು ಸರಕಾರ ಮುಚ್ಚಿ ಹಾಕುವುದರ ಹಿಂದೆ ಕೆಲವು ಕಾರ್ಪೊರೇಟ್ ಹಿತಾಸಕ್ತಿಗಳು ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿದೆ. ಇಂದು ಭಾರತದ ನಾಶಕ್ಕೆ ಶತ್ರು ರಾಷ್ಟ್ರಗಳು ಕ್ಷಿಪಣಿ ದಾಳಿ ನಡೆಸಬೇಕಾಗಿಲ್ಲ. ನಮ್ಮ ಮಡಿಲಲ್ಲೇ ನಾವು ವಿವಿಧ ಸ್ಥಾವರಗಳು, ಕೈಗಾರಿಕೆಗಳ ಹೆಸರಲ್ಲಿ ಅಣುಬಾಂಬ್‌ಗಳನ್ನು ಬಚ್ಚಿಟ್ಟು ಕೊಂಡಿದ್ದೇವೆ. ಇದರ ಯೋಗಕ್ಷೇಮ, ಭದ್ರತೆಯ ಬಗ್ಗೆ ಸರಕಾರ ಗಂಭೀರವಾಗಿ ಯೋಚಿಸದೇ ಇದ್ದರೆ, ಈ ಅಭಿವೃದ್ಧಿಯ ಸಂಕೇತಗಳೇ ನಮ್ಮ ನಾಳೆಗಳನ್ನು ಬಲಿತೆಗೆದುಕೊಂಡೀತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News