×
Ad

ಚಿಕ್ಕಮಗಳೂರು: ಜೈಲಿನಲ್ಲಿ ತನ್ನ ಕತ್ತನ್ನೇ ಕುಯ್ದ ವಿಚಾರಣಾಧೀನ ಕೈದಿ

Update: 2020-06-14 23:49 IST

ಚಿಕ್ಕಮಗಳೂರು, ಜೂ.14: ವಿಚಾರಣಾಧೀನ ಕೈದಿಯೊಬ್ಬ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಜಿಲ್ಲಾ ಕಾರಾಗೃಹದಲ್ಲಿ ರವಿವಾರ ವರದಿಯಾಗಿದೆ. 

ವಿಚಾರಣಾಧೀನ ಕೈದಿ ರಾಜನ್ ಬಿನ್ ಶ್ರೀಧರ್ ಎಂಬಾತ ಶೌಚಾಲಯದಲ್ಲಿ ಬ್ಲೇಡ್‍ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದ್ದು, ರವಿವಾರ ಬೆಳಗ್ಗೆ ಶೌಚಾಲಯಕ್ಕೆ ಹೋದ ವೇಳೆಯಲ್ಲಿ ಬ್ಲೇಡ್‍ನಿಂದ ಕತ್ತುಕೊಯ್ದುಕೊಂಡಿದ್ದು, ಶೌಚಾಲಯಕ್ಕೆ ಹೋದ ವ್ಯಕ್ತಿ ಬಹಳಷ್ಟು ಸಮಯವಾದರೂ ಯಾಕೆ ಹೊರಗೆ ಬರಲಿಲ್ಲವೆಂದು ಮತ್ತೊಬ್ಬ ಕೈದಿ ನೋಡಿದಾಗ ರಾಜನ್ ಶೌಚಾಲಯದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಾರಾಗೃಹ ಅಧಿಕಾರಿ ಹಾಗೂ ಸಿಬ್ಬಂದಿಗೆ ತಿಳಿಸಿದ್ದಾನೆ. 

ತಕ್ಷಣ ಕಾರ್ಯಪ್ರವೃತ್ತರಾದ ಕಾರಾಗೃಹ ಅಧಿಕಾರಿ ಹಾಗೂ ಸಿಬ್ಬಂದಿ ಕೈದಿ ರಾಜನ್‍ನನ್ನು ತಕ್ಷಣ ಮಲ್ಲೇಗೌಡ ಸರಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆಯ ಬಳಿಕ ಕೈದಿ ಚೇತರಿಸಿಕೊಂಡಿದ್ದು, ಕೈದಿಗೆ ಉಗುರು ಕತ್ತರಿಸಿಕೊಳ್ಳಲು ಜೈಲು ಸಿಬ್ಬಂದಿ ಬ್ಲೇಡ್ ನೀಡಿದ್ದು, ಈ ಬ್ಲೇಡ್‍ನಿಂದಲೇ ಕತ್ತು ಕೊಯ್ದುಕೊಂಡಿದ್ದಾನೆಂದು ತಿಳಿದು ಬಂದಿದೆ.

ಕೈದಿಯು ಕೌಟುಂಬಿಕ ಕಲಹದ ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದು, ಮಾನಸಿಕ ಖಿನ್ನತೆಯಿಂದಾಗಿ ಆತ್ಮಹತ್ಯೆಗೆ ಯತ್ನಿಸಿರಬಹುದೆಂದು ಶಂಕಿಸಲಾಗಿದೆ. ಸದ್ಯ ಕೈದಿಯು ಪ್ರಾಣಪಾಯದಿಂದ ಪಾರಾಗಿದ್ದು, ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News