ಕೊರೋನ ಜಾಗೃತಿ: ಗುರುವಾರ ರಾಜ್ಯದಲ್ಲಿ 'ಮಾಸ್ಕ್ ಡೇ' ಆಚರಣೆ
ಬೆಂಗಳೂರು, ಜೂ.15: ರಾಜ್ಯದಲ್ಲಿ ಕೊರೋನ ನಿಯಂತ್ರಣ ಮಾಡುವ ಸಲುವಾಗಿ ಜನರಲ್ಲಿ ಜಾಗೃತಿ ಮೂಡಿಸಲು ಗುರುವಾರ (ಜೂ.18) ಮಾಸ್ಕ್ ಡೇ ಆಚರಣೆ ಮಾಡಲು ರಾಜ್ಯ ಸರಕಾರ ಮುಂದಾಗಿದೆ.
ಕಳೆದ ಕೆಲವು ದಿನಗಳಿಂದ ಬೆಂಗಳೂರು ನಗರದಲ್ಲಿ ಹಾಗೂ ರಾಜ್ಯದಲ್ಲಿ ಸೋಂಕು ಹೆಚ್ಚಳವಾಗುತ್ತಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆಗೆ ಸೋಮವಾರ ಸಿಎಂ ಬಿಎಸ್‍ವೈ ಸವಿಸ್ತಾರವಾಗಿ ಚರ್ಚೆ ನಡೆಸಿದ್ದು, ಸಭೆಯ ಬಳಿಕ ಮಾತನಾಡಿದ ಅವರು ಮಾಸ್ಕ್ ಡೇ ಆಚರಣೆಯ ನಿರ್ಧಾರವನ್ನು ತಿಳಿಸಿದರು.
ಗುರುವಾರ ಮಾಸ್ಕ್ ಡೇ ಆಚರಣೆಯನ್ನು ಬೆಂಗಳೂರಿನಲ್ಲಿ ವಿಧಾನಸೌಧದ ಬಳಿ ಚಾಲನೆ ನೀಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಸಿನಿಮಾ ನಟರು ಹಾಗೂ ಕ್ರೀಡಾಪಟುಗಳು ಭಾಗಿಯಾಗಲಿದ್ದಾರೆ. ಈ ಮೂಲಕ ಜನರಲ್ಲಿ ಅರಿವು ಮೂಡಿಸುವುದು ಸರಕಾರದ ಉದ್ದೇಶವಾಗಿದೆ ಎಂದರು.
ಬೆಂಗಳೂರು ಮಾತ್ರ ಅಲ್ಲದೆ ಜಿಲ್ಲಾ, ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ಮಾಸ್ಕ್ ಡೇ ಆಚರಣೆಯನ್ನು ನಡೆಸಲು ಸರಕಾರ ನಿರ್ಧರಿಸಿದೆ. ಸೋಂಕು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಧರಿಸದ ವ್ಯಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಆರಂಭಿಕ ಹಂತದಲ್ಲಿ 200 ದಂಡ ವಿಧಿಸಲು ಸೂಚನೆ ನೀಡಲಾಗಿದೆ.